ರಾಯಚೂರು: ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್ ಬೇಡಿಕೆ ತೀವ್ರವಾಗಿ ಕುಸಿಯುತ್ತಿದೆ. ಹೀಗಾಗಿ ರಾಯಚೂರಿನಲ್ಲಿನ ಆರ್ ಟಿಪಿಎಸ್ ನ ನಾಲ್ಕು ವಿದ್ಯುತ್ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಶಕ್ತಿನಗರದ ಆರ್ ಟಿಪಿಎಸ್ (Raichur Thermal Power Station) ವಿದ್ಯುತ್ ಕೇಂದ್ರಕ್ಕೆ ತಾತ್ಕಾಲಿಕ ವಿಶ್ರಾಂತಿ ನೀಡಲಾಗಿದೆ. ವಿದ್ಯುತ್ ಕೇಂದ್ರದ ಐದು ಘಟಕಗಳನ್ನು ಬಂದ್ ಮಾಡಿ ವಿದ್ಯುತ್ ಉತ್ಪಾದನೆಯನ್ನೇ ಅಲ್ಲಿ ನಿಲ್ಲಿಸಲಾಗಿದೆ. ರಾಜ್ಯದ ಅರ್ಧದಷ್ಟು ಭಾಗಕ್ಕೆ ವಿದ್ಯುತ್ ಕೊಡುವ ರಾಯಚೂರು (Raichur) ವಿದ್ಯುತ್ ಉತ್ಪಾದನಾ ಕೇಂದ್ರದ ಒಟ್ಟು ಎಂಟು ಘಟಕಗಳಲ್ಲಿ 2, 3, 4, 6 ಮತ್ತು 7ನೇ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
1ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ಬಂದ್ ಆಗಿದೆ. ಸದ್ಯ 5 ಮತ್ತು 8 ನೇ ಘಟಕಗಳಿಂದ ಕೇವಲ 310 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯ ಕುಸಿದ ಹಿನ್ನೆಲೆ ಘಟಕಗಳಿಗೆ ವಿಶ್ರಾಂತಿ ನೀಡಿ ನಿರ್ವಹಣೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.