ಚಿಕ್ಕೋಡಿ: ವಿಜಯೇಂದ್ರನನ್ನು ನಾನು ಯಾವತ್ತೂ ಒಪ್ಪುವುದಿಲ್ಲ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಭ್ರಷ್ಟ ಲೇಬಲ್ ಬರಲು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಕಾರಣ. ಹೀಗಾಗಿ ನಾನು ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನವನ್ನು ಎಂದಿಗೂ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು ಎಂದಿದ್ದಾರೆ.
ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್. ಆತನಿಗೆ ಯಾವುದೇ ಐಡಿಯಾಲಜಿ ಇಲ್ಲ. ಯಾವ ಸಿದ್ಧಾಂತ ಇಲ್ಲ. ಭಾರತಿಯ ಜನತಾ ಪಕ್ಷದ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ನಾನು ಯಡಿಯೂರಪ್ಪನವರನ್ನು (Yediyurappa) ಯಾವತ್ತೂ ವಿರೋಧ ಮಾಡುವುದಿಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕರು. ಅವರ ಬಗ್ಗೆ ಗೌರವವಿದೆ. ಅವರು ಕೂಡ ರಾಜಕೀಯ ವಿಶ್ರಾಂತಿ ಪಡೆಯಬೇಕು ಎಂದಿದ್ದಾರೆ.
ಹೀಗಾಗಿ ನಾವು ಇತ್ತೀಚೆಗೆ ಪಡೆದ ಮುಖಂಡರ ಸಭೆಯಲ್ಲಿ, ಸಾಮೂಹಿಕ ನಾಯಕತ್ವಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ನಾಯಕತ್ವ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ಕೊಟ್ಟಂತಹ ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗೆ ಹಾಕಿ ಎಂದು ಹೇಳಿದ್ದೇವೆ ಎಂದಿದ್ದಾರೆ.