ಬೆಂಗಳೂರು: ರಾಜ್ಯಪಾಲರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರೇ (Governor) ವಿರೋಧ ಪಕ್ಷದ ನಾಯಕನ ರೀತಿ ವರ್ತಿಸುತ್ತಿದ್ದಾರೆ. ಆರ್ ಟಿಐ ಕಾರ್ಯಕರ್ತರಂತೆ ಮಾಹಿತಿ ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ನಡೆ ನೋಡಿದರೆ ಇವರೇ ವಿರೋಧ ಪಕ್ಷದ ನಾಯಕರ ರೀತಿ ಆಡುತ್ತಿದ್ದಾರೆ. ಆರ್‌ಟಿಐ ಆಕ್ಟಿವಿಸ್ಟ್‌ಗಳು ಅರ್ಜಿ ಹಾಕಿ ಮಾಹಿತಿ ಕೇಳುತ್ತಾರೆ. ಆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರಿಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಬರೆದು ಮಾಹಿತಿ ಕೇಳುತ್ತಿದ್ದಾರೆ. ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು.
ಈ ರೀತಿಯ ವರ್ತನೆ ರಾಜ್ಯಪಾಲರಿಗೆ ಗೌರವ ತರುವುದಿಲ್ಲ. ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ನನಗೆ ಆಶ್ಚರ್ಯ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇವೆ. ಕೇಂದ್ರ ಸರ್ಕಾರ ಈಗ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








