ಮೈಸೂರು ಅರಮನೆಯಲ್ಲಿ ಪ್ರತಿ ವರ್ಷದಂತೆಯೇ ಈ ವರ್ಷ ದಸರಾ ಆಚರಿಸಲಾಗುವುದು. ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಸಂಸದ ಯುದುವೀರ್ ಡೆಯರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಸದನಾದರೂ ಯಾವುದೇ ಬದಲಾವಣೆ ಇಲ್ಲದೆ ಹಬ್ಬ ಆಚರಿಸಲಾಗುತ್ತದೆ. ಅರಮನೆ ಆವರಣದಲ್ಲಿ ಕಂಜನ್ ಮತ್ತು ಧನಂಜಯ್ ಮಧ್ಯೆ ದೊಡ್ಡ ಕಾಳಗ ನಡೆದಿದೆ. ಹೀಗಾಗಿ ಈ ಬಾರಿ ಆನೆಗಳ ಮುಂದೆ ಫೋಟೊ ಸೆಲ್ಫಿ ತೆಗೆದುಕೊಳ್ಳವರಿಗೆ ಕಡಿವಾಣ ಹಾಕಬೇಕಿದೆ. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆನೆಗಳ ಗಲಾಟೆ ಜನರಿಂದ ಆಗಿಲ್ಲ. ಭದ್ರತೆ ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ.
ಮಹಿಷಾ ದಸರಾ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಭಾವನೆಗೆ ದಕ್ಕೆಯಾಗದ ರೀತಿ ಆಚರಣೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸಂವಿಧಾನ ದೃಷ್ಟಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದರೆ ತೊಂದರೆ ಇಲ್ಲ. ಯಾರಿಗೂ ಯಾವುದೇ ರೀತಿಯ ಹಾನಿಯಾಗದೆ ರೀತಿ ಕಾರ್ಯಕ್ರಮ ಮಾಡಿಕೊಳ್ಳಬಹುದು. ಅದನ್ನ ಯಾರು ನಿಲ್ಲಿಸಲು ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿಯಲ್ಲಿ ನಂಬಿಕೆಯಿಟ್ಟ ಎಲ್ಲರ ಹಾಗೂ ಧರ್ಮದಲ್ಲಿ ನಂಬಿಕೆ ಇಟ್ಟವರ ಭಾವನೆಗಳಿಗೆ ಧಕ್ಕೆಯಾಗದ ರೀತಿ ನಡೆದುಕೊಂಡರೆ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡಬೇಕೆಂಬ ಕೂಗಿಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಯಾಕೆ ಮಾಡಬೇಕು? ಅದು ಚಾಮುಂಡೇಶ್ವರಿ ತಾಯಿಯ ಕ್ಷೇತ್ರ. ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಿ.
ಪದ್ದತಿ ಏನಿದೆ, ಧರ್ಮದಲ್ಲಿ ನಾವು ಏನು ಅನುಸರಿಸುತ್ತೇವೆ. ನಮ್ಮ ನಂಬಿಕೆ ಏನಿದೆ ಅದಕ್ಕೆ ಧಕ್ಕೆ ಬರಬಾರದು ಎಂದು ಹೇಳಿದ್ದಾರೆ.








