ನವದೆಹಲಿ: ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅತಿಶಿ ಸಿಂಗ್ (Atishi Singh) ಇಂದು (ಸೆ.23) ಸಚಿವಾಲಯಕ್ಕೆ ತೆರಳಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನದ ಕುರ್ಚಿಯಲ್ಲಿ ಕೂರದೇ ಪಕ್ಕದಲ್ಲಿ ಮತ್ತೊಂದು ಕುರ್ಚಿ ಹಾಕಿಕೊಂಡು ಕೂತು ಕಡತಗಳಿಗೆ ಸಹಿ ಹಾಕುವ ಮೂಲಕ ಸಿಎಂ (CM) ಆಗಿ ಕೆಲಸ ಆರಂಭಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ವನವಾಸಕ್ಕೆ ಹೋದಾಗ ಸಹೋದರ ಭರತ ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಆಡಳಿತವನ್ನು ನಡೆಸಿದರು. ಹೀಗಾಗಿ ನಾನು ಕೇಜ್ರಿವಾಲ್ ಸ್ಥಾನದಲ್ಲಿ ಕೂರುವುದಿಲ್ಲ. ಅವರನ್ನು ಮತ್ತೆ ಈ ಸ್ಥಾನಕ್ಕೆ ತರಲು ನಾಲ್ಕು ತಿಂಗಳು ಶ್ರಮಿಸುತ್ತೇನೆ ಎಂದಿದ್ದಾರೆ.
ಈ ಕುರ್ಚಿಯು ಅರವಿಂದ್ ಕೇಜ್ರಿವಾಲ್ (Arvind Kejrival) ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಅತಿಶಿ ದೆಹಲಿಯ ಎಂಟನೇ ಮತ್ತು ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.








