ಬೆಂಗಳೂರು: ಹೈಕೋರ್ಟ್ (High Court) ತನಿಖೆಗೆ ಆದೇಶ ನೀಡಿದೆ. ಆದರೆ, ಪ್ರಾಸಿಕ್ಯೂಷನ್ ಗೆ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಕ್ಷನ್ 17 ಎ, 19 ರ ಅಡಿ ಪ್ರಾಸಿಕ್ಯೂಷನ್‌ಗೆ ದೂರುದಾರರು ಅನುಮತಿ ಕೇಳಿದ್ದರು. ಪಿಸಿ ಕಾಯ್ದೆಯ 19 ಅಡಿ ಕೇಳಿದ್ದ ಮನವಿಯನ್ನು ರಾಜ್ಯಪಾಲರೇ ತಿರಸ್ಕರಿಸಿದ್ದರು. ಈಗ ಕೋರ್ಟ್ ಬಿಎನ್‌ಎಸ್ ಸೆಕ್ಷನ್ 218ರ ಅಡಿ ನೀಡಿರುವ ಅನುಮತಿ ತಿರಸ್ಕರಿಸಿದೆ. ನ್ಯಾಯಾಲಯ ಈಗ ಪಿಸಿ ಕಾಯ್ದೆಯ ಸೆಕ್ಷನ್ 17 ಎ ಮಾತ್ರ ಸೀಮಿತಗೊಳಿಸಿ ಆದೇಶ ನೀಡಿದೆ ಎಂದಿದ್ದಾರೆ.
ಪಿಸಿ ಕಾಯ್ದೆಯ ಸೆಕ್ಷನ್ 17 ಎ ಅಡಿ ಸೀಮಿತಗೊಳಿಸಿ ಆದೇಶ ಪ್ರಕಟಿಸಿದ್ದರಿಂದ ತನಿಖೆ ಮಾತ್ರ ಅನುಮತಿ ಸಿಕ್ಕಿದೆ. ಇದು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿ ಅಲ್ಲ. ಮುಂದಿನ ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಇದೊಂದು ಕಾನೂನಾತ್ಮಕ ಹೋರಾಟ. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ನಾನು ತಪ್ಪು ಮಾಡಿಲ್ಲ. 17 ಎ ಅಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಹಾಗೂ ಈಗಿನ ಗ್ಯಾರಂಟಿ ಯೋಜನೆಗಳನ್ನು ಸಹ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವುದು ಅವರ ದುರಾಲೋಚನೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣ ಪರಿಶೀಲಿಸಿ , ಮುಂದಿನ ಪ್ರತಿಕ್ರಿಯೆಯನ್ನು ನೀಡುವುದಾಗಿ ಹೇಳಿದರು.
ಬಿಜೆಪಿ, ಜೆಡಿಎಸ್ ನ ಪಿತೂರಿಗೆ ನಾನು ಎಂದೂ ಹೆದರಿಲ್ಲ. ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು , ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ , ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.








