ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ವಿದ್ಯುತ್ ಸ್ಥಾವರ ಉದ್ಘಾಟನೆ ನೆರವೇರಿಸಿದ್ದಾರೆ.
ಈ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸ್ಥಾಪಿಸಿರುವ ರಾಜ್ಯದ ಮೊಟ್ಟ ಮೊದಲ 370 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ಯಲಹಂತ ಸಂಯುಕ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ (K J George) ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. 2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಎಂಟು ವರ್ಷಗಳ ನಂತರ ಮುಖ್ಯಮಂತ್ರಿಯಾಗಿ ಸ್ಥಾವರ ಲೋಕಾರ್ಪಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಬೇಸಿಗೆಯಲ್ಲಿ 16 ರಿಂದ 17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15 ರಿಂದ 16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಭವಿಷ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು 2030ರ ವೇಳೆಗೆ 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಬಜೆಟ್‌ನಲ್ಲಿ ಘೋಷಿಸಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.








