ಬೆಂಗಳೂರು: ಪಿಜಿ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ (Bullet Bike) ಬೆಂಕಿ ಹಚ್ಚಿರುವ ಪ್ರಕರಣವೊಂದು ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪುಲ್ಕಿತ್ (25) ಬಂಧಿತ ಆರೋಪಿ ಎನ್ನಲಾಗಿದೆ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ (HMT Layout) ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಿದ್ದ. ಈ ಘಟನೆ ಸೆ. 19ರಂದು ನಡೆದಿತ್ತು. ಆರೋಪಿಯು ಬೈಕ್ ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಬೈಕ್ ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್ ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಈತ ಪರಾರಿಯಾಗಿದ್ದ. ಬೆಂಕಿಯು ಬುಲೆಟ್ ಗೆ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮೂರು ಬೈಕ್ ಗಳಿಗೂ ಬೆಂಕಿ ತಗುಲಿತ್ತು.
ಹೀಗಾಗಿ ಬುಲೆಟ್ ಬೈಕ್ ಸವಾರ ದೀಪಾಂಶು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪುಲ್ಕಿತ್ ನನ್ನು ಬಂಧಿಸಿದ್ದಾರೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ ಬೇರೆಯವರ ಬುಲೆಟ್ ಬೈಕ್ ಸೌಂಡ್ ಆದರೆ ಕೋಪಗೊಳ್ಳುತ್ತಿದ್ದ. ಹೀಗಾಗಿ ಕೋಪಬಂದು ಪಿಜಿಗಳ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.