ಬೆಂಗಳೂರು: ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ. ಯಾವುದೇ ಆರೋಪಕ್ಕೆ ಹೆದರುವುದಿಲ್ಲ ಎಂದು ತಮ್ಮ ವಿರುದ್ಧದ ಮುಡಾ ಹಗರಣವನ್ನು ಲೋಕಾಯುಕ್ತ ತನಿಖೆಗೆ ಕೋರ್ಟ್ ಸೂಚಿಸಿರುವ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾವು ತನಿಖೆ ಎದುರಿಸಲು ಸಿದ್ದ. ತನಿಖೆಗೆ ಹೆದರಲ್ಲ. ಕಾನೂನು ಹೋರಾಟಕ್ಕೆ ಸಿದ್ದನಾಗಿದ್ದೇನೆ. ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಎಫ್ ಐ ಆರ್ ದಾಖಲು ಮಾಡಲು ನಿರ್ದೇಶನ ನೀಡಿದ್ದಾರೆ. ಹೈಕೋರ್ಟ್ ತನಿಖೆ ಮಾಡಲು ತೀರ್ಪು ನೀಡಿತ್ತು. ಈಗ ಜನಪ್ರತಿನಿಧಿಗಳ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.
ನಾನು ಇದುವರೆಗೂ ಕೋರ್ಟ್ ನ ತೀರ್ಪು ಓದಿಲ್ಲ. ಪೂರ್ತಿ ಆದೇಶ ಓದಿದ ನಂತರ ಪ್ರತಿಕ್ರಿಯಿಸುತ್ತೇನೆ. ಇವಾಗ ಕೇರಳಕ್ಕೆ ತೆರಳುತ್ತಿದ್ದೇನೆ. ಆದೇಶದ ಪ್ರತಿ ಪೂರ್ತಿ ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ದೇಸಾಯಿ ಆಯೋಗದ ತನಿಖೆ ಪರ್ಯಾಯವಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತದಲ್ಲಿ ಎಫ್ ಐ ಆರ್ ಹಾಕುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಹಲವಾರು ನಾಯಕರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.








