ಜೆರುಸಲೆಂ: ಇಸ್ರೇಲ್ ಹಾಗೂ ಲೆಬನಾನ್ ಮಧ್ಯೆ ನಡೆಯುತ್ತಿರುವ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಲೆಬನಾನ್ ನಲ್ಲಿ ಕದನ ವಿರಾಮದ (Ceasefire) ಪ್ರಸ್ತಾಪ ತಿರಸ್ಕರಿಸಿದ್ದಾರೆ.
21 ದಿನಗಳ ಕದನವಿರಾಮ ಪ್ರಸ್ತಾಪವನ್ನು ತಿರಸ್ಕರಿಸಿದ ನೆತನ್ಯಾಹು, ಹೆಜ್ಬುಲ್ಲಾ ವಿರುದ್ಧದ ಹೋರಾಟವನ್ನು ಮುಂದುವರಿಸಲು ಕರೆ ನೀಡಿದ್ದಾರೆ. ಹೀಗಾಗಿ ಪೂರ್ಣಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಕಚೇರಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕೆಲವು ದಿನಗಳಿಂದ ಲೆಬನಾನ್ (Lebanon) ಮೇಲೆ ಇಸ್ರೇಲ್ ನಿರಂತರವಾಗಿ ವಾಯು ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳೂ ಸೇರಿದಂತೆ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇತರ ಮಿತ್ರ ರಾಷ್ಟ್ರಗಳು ಲೆಬನಾನ್ ನಲ್ಲಿ 21 ದಿನಗಳ ಕಾಲ ಕದನ ವಿರಾಮ ಘೋಷಿಸುವಂತೆ ಜಂಟಿ ಕರೆ ನೀಡಿದ್ದವು. ಈ ಯುದ್ಧ ಯಾರ ಹಿತಾಸಕ್ತಿಯ ಪರವಾಗಿಯೂ ಇಲ್ಲ. ಇಸ್ರೇಲ್ ಅಥವಾ ಲೆಬನಾನ್ ಎರಡೂ ದೇಶಗಳ ಜನರ ಹಿತಾಸಕ್ತಿಯ ಪರವಾಗಿ ಈ ಯುದ್ಧ ನಡೆಯುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ಹೇಳಿವೆ.
ರಾಜತಾಂತ್ರಿಕ ಒಪ್ಪಂದದ ತೀರ್ಮಾನಕ್ಕೆ ಬದ್ಧರಾಗಿ ಇಸ್ರೇಲ್ ನಡೆದುಕೊಳ್ಳಬೇಕು. ರಾಜತಾಂತ್ರಿಕ ನಡೆಗಳಿಗೆ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಲೆಬನಾನ್ ಹಾಗೂ ಇಸ್ರೇಲ್ ಗಡಿಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ 21 ದಿನಗಳ ಕಾಲ ಕದನ ವಿರಾಮ ಜಾರಿ ಮಾಡಲು ಕರೆ ನೀಡುತ್ತೇವೆ ಎಂದು ಅಮೆರಿಕ, ಯುರೋಪ್ ಮಿತ್ರ ರಾಷ್ಟ್ರಗಳು ತಿಳಿಸಿವೆ. ಇದರ ಬೆನ್ನಲ್ಲೇ ಇಸ್ರೇಲ್ ಪೂರ್ಣ ಯುದ್ಧ ಘೋಷಿಸಿದ್ದು, ಆತಂಕಕ್ಕೆ ಕಾರಣವಾಗಿದೆ.








