ಟೋಕಿಯೋ: ಜಪಾನ್ ನ (Japan) ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ (Airport ) 2ನೇ ಮಹಾಯುದ್ದದ (2nd World War) ಕಾಲದ ಬಾಂಬ್ ಸ್ಪೋಟಗೊಂಡಿದೆ.
ಈ ಹಿನ್ನೆಲೆಯಲ್ಲಿ 87 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. 2ನೇ ಮಹಾಯುದ್ಧ ನಡೆದ ಸಂದರ್ಭದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಸ್ಫೋಟಗೊಳ್ಳದ ಬಾಂಬ್ ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತು. ಆದರೆ, ಈಗ ಅವು ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ,
ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿ ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದ್ದಾರೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುಳಿ ತುಂಬುವ ದುರಸ್ತಿ ಇಂದು (ಗುರುವಾರ) ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಫೋಟದ ಹಿಂದಿನ ನಿಖರ ಕಾರಣಕ್ಕಾಗಿ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ಜಪಾನ್ ದೇಶಕ್ಕೆ ಇಂತಹ ಸ್ಫೋಟಗೊಳ್ಳದ ಬಾಂಬ್ ಗಳು ಬೆದರಿಕೆಯಂತಾಗಿ ಬಿಟ್ಟಿವೆ. ಯುದ್ಧ ನಡೆದು 79 ವರ್ಷಗಳ ನಂತರ ಬಾಂಬ್ ಸ್ಫೋಟಗೊಂಡಿದ್ದಕ್ಕೆ ಆತಂಕ ಮನೆ ಮಾಡುತ್ತಿದೆ. ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಹಿಂದೆ ಹಲವು ಸ್ಫೋಟಿಸದ ಬಾಂಬ್ ಗಳು ಪತ್ತೆಯಾಗಿದ್ದವು. 2023 ರಲ್ಲಿ ಸ್ವಯಂ ರಕ್ಷಣಾ ಪಡೆಗಳು 37.5 ಟನ್ ತೂಕದ 2,348 ಬಾಂಬ್ ಗಳನ್ನು ವಿಲೇವಾರಿ ಮಾಡಿವೆ ಎನ್ನಲಾಗಿದೆ.








