ಎಂ.ಎಸ್. ಧೋನಿ ಚಾಂಪಿಯನ್ ಆಟಗಾರ- ವಕಾರ್ ಯೂನಸ್
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚಾಂಪಿಯನ್ ಆಟಗಾರ. ಎರಡು ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದರ ಜೊತೆಗೆ ಐಸಿಸಿ ನಂಬರ್ ವನ್ ಟೆಸ್ಟ್ ತಂಡದ ನಾಯಕನಾಗಿರುವುದು ಹಾಗೂ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಯಶ ಸಾಧಿಸಿದ್ದ ವಿಶ್ವದ ಏಕೈಕ ನಾಯಕ ಎಂದು ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಸ್ ಹೇಳಿದ್ದಾರೆ.
ಸೌರವ್ ಗಂಗೂಲಿ ಕಟ್ಟಿ ಬೆಳೆಸಿದ್ದ ಟೀಮ್ ಇಂಡಿಯವನ್ನು ಯಶಸ್ಸಿನತ್ತ ಮುನ್ನಡೆಸಿರುವುದು ಮಹೇಂದ್ರ ಸಿಂಗ್ ಅವರು. ಸೌರವ್ ಗಂಗೂಲಿ ಟೀಮ್ ಇಂಡಿಯಾದ ಯಶಸ್ಸಿಗೆ ಅಡಿಪಾಯ ಹಾಕಿಕೊಟ್ಟಿದ್ದರು. ಅದನ್ನು ಮಹೇಂದ್ರ ಸಿಂಗ್ ಧೋನಿ ಅವರು ಅದ್ಭುತವಾಗಿ ಮುನ್ನಡೆಸಿದ್ರು. ಧೋನಿ ವಿಶ್ವಕಪ್‍ನ ಚಾಂಪಿಯನ್. 2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಗೆಲುವು ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವು, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಟೆಸ್ಟ್ ರ್ಯಾಂಕಿಂಗ್‍ನಲ್ಲೂ ನಂಬರ್ ವನ್ ಸ್ಥಾನಕ್ಕೇರಿಸಿದ್ದರು. ಧೋನಿ ತನ್ನ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ವಕಾರ್ ಯೂನಸ್ ಹೇಳಿದ್ದಾರೆ.
ಎಂ. ಎಸ್. ಧೋನಿ ಅದ್ಭುತವಾದ ಕ್ರಿಕೆಟಿಗ. ತಂಡವನ್ನು ಮುನ್ನಡೆಸಿದ್ದ ರೀತಿಯೂ ಅಮೋಘವಾಗಿತ್ತು. ಅದನ್ನು ಪದಗಳಲ್ಲಿ ಹೇಳುವುದು ಕಷ್ಟ. ಧೋನಿ ಅಪ್ರತಿಮ ನಾಯಕನೂ ಹೌದು. ಪಂದ್ಯದ ಗತಿಯನ್ನು ಬಲುಬೇಗನೇ ಅರಿತುಕೊಳ್ಳುತ್ತಿದ್ದರು. ಹಾಗೇ ಒಬ್ಬ ಅದ್ಭುತವಾದ ವ್ಯಕ್ತಿ ಕೂಡ, ಸಣ್ಣ ಗ್ರಾಮದಿಂದ ಬಂದಿರುವ ಧೋನಿ ದೇಶವನ್ನು ಪ್ರತಿನಿಧಿಸಿ, ತಂಡವನ್ನು ಮುನ್ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿರುವುದು ಅದ್ಭುತ ಎಂದು ವಕಾರ್ ಯೂನಸ್ ಹೇಳಿದ್ದಾರೆ.
ಇನ್ನು ಸೌರವ್ ಗಂಗೂಲಿಯ ಬಗ್ಗೆ ಮಾತನಾಡಿದ್ದ ವಕಾರ್ ಯೂನಸ್, ಭಾರತೀಯ ಕ್ರಿಕೆಟ್‍ಗೆ ಸೌರವ್ ಗಂಗೂಲಿಯ ಕೊಡುಗೆ ಅಪಾರವಾದದ್ದು. ಹಾಗೇ ಅವರು ನಾಯಕನಾಗಿ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. ದೇಸಿ ಮತ್ತು ವಿದೇಶಿ ನೆಲಗಳಲ್ಲಿ ಗೆಲುವಿನ ರುಚಿ ತೋರಿಸಿದ್ದ ನಾಯಕ. ಟೀಮ್ ಇಂಡಿಯಾದ ಗತಿಯನ್ನೇ ಬದಲಾಯಿಸಿದ್ದ ನಾಯಕ ಎಂದು ವಕಾರ್ ಯೂನಸ್ ಅವರು ಗಂಗೂಲಿಯವರನ್ನು ಬಣ್ಣಿಸಿದ್ರು.