ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೊನಾ ಸೋಂಕಿತನ ಬಂಧನ
ಮಂಗಳೂರು, ಜುಲೈ 6: ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊರೊನಾ ಸೋಂಕಿತ ದೇವರಾಜು(18)ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸಿ.ಪಿ ವಿಕಾಸ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಶಂಕರಪ್ಪ ಲಮಣಿ ಮತ್ತು ಶಂಕರಪ್ಪ ನಂದ್ಯಾಲ್ ಅವರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಆರೋಪಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ ಬಂಧಿಸುವ ಮೂಲಕ ನಿಜವಾದ ಹೀರೋಗಳಾಗಿದ್ದಾರೆ. ಆದರೂ ಆರೋಪಿ ದೇವರಾಜ್ ನಿಂದ ಅನೇಕರಿಗೆ ಸೋಂಕು ತಗುಲಿರಬಹುದು ಎಂಬ ಆತಂಕವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ನ ಬಾರ್ ಬಳಿ ಸೋಮವಾರ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ಆತನನ್ನು ಬಂಧಿಸಲಾಯಿತು. ಆತ ಪ್ರಯಾಣಿಸಲು ಹಣವಿರದೆ ಸ್ಟೇಟ್ ಬ್ಯಾಂಕ್, ನೆಹರು ಮೈದಾನದ ಬಳಿ ಸುತ್ತಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತಃ ಪುತ್ತೂರು ದರ್ಬೆ ನಿವಾಸಿಯಾಗಿದ್ದ ಈತ ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಈತನಿಗೆ ಭಾನುವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಸಂಜೆಯ ವೇಳೆಗೆ ಆತ ತಪ್ಪಿಸಿಕೊಂಡಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








