ಕೊರೋನಾ ವೈರಸ್ ನಡುವೆಯೂ ಐಪಿಎಲ್ ಆತಿಥ್ಯಕ್ಕೆ ಭಾರೀ ಡಿಮ್ಯಾಂಡ್…!
ಐಪಿಎಲ್ ಟೂರ್ನಿಯ ಆತಿಥ್ಯಕ್ಕೆ ಮುಂದಾದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ…!
ವಿಶ್ವದೆಲ್ಲೆಡೆ ಕೊರೋನಾ ವೈರಸ್ ಹಾವಳಿಯಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಬಿಸಿಸಿಐನ ಚಿನ್ನದ ಕೋಳಿ ಐಪಿಎಲ್ ಟೂರ್ನಿಗೆ ಮಾತ್ರ ಭಾರೀ ಡಿಮ್ಯಾಂಡ್. ಈಗಾಗಲೇ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಐಸಿಸಿ ಇನ್ನೂ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಬಿಸಿಸಿಐ ಕೂಡ ಅಸಮಾಧಾನಗೊಂಡಿದೆ. ಹೀಗಾಗಿ ಐಸಿಸಿ ತೀರ್ಮಾನಕ್ಕೆ ಕಾಯದೇ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ ಅನ್ನೋ ಸುದ್ದಿಯೂ ಹೊರಬಿದ್ದಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸುವುದು ಅಸಾಧ್ಯವಾಗಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದ್ರೂ ಅಕ್ಟೋಬರ್-ನವೆಂಬರ್ ನಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಲೆಕ್ಕಚಾರವನ್ನು ಬಿಸಿಸಿಐ ಹಾಕಿಕೊಂಡಿದೆ. ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಸಂಘಟಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ.
ಇನ್ನೊಂದೆಡೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಯುಎಇ ಕ್ರಿಕೆಟ್ ಮಂಡಳಿಗೆ ಮುಂದೆ ಬಂದಿವೆ. ಹಾಗೇ ಇದೀಗ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೂ 2020ರ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಆಸಕ್ತಿ ವಹಿಸಿದೆ. ಈ ಬಗ್ಗೆ ಬಿಸಿಸಿಐಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರಸ್ತಾವಣೆ ಹಾಕಿದೆ.
ಈ ಹಿಂದೆ 2009ರ ಐಪಿಎಲ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿತ್ತು. ಅದೇ ರೀತಿ 2014ರಲ್ಲಿ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲಾಗಿತ್ತು. ಈ ಎರಡು ಟೂರ್ನಿಗಳಿಗೂ ಲೋಕ ಸಭಾ ಚುನಾವಣೆ ಅಡ್ಡಿಯಾಗಿತ್ತು. ಆದ್ರೆ ಈಗ ಅಡ್ಡಿಯಾಗುತ್ತಿರುವುದು ಕೊರೋನಾ ವೈರಸ್
ಇದೀಗ ನ್ಯೂಜಿಲೆಂಡ್ ಮುಂದೆ ಬಂದಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಯಾಕಂದ್ರೆ ಕೊರೋನಾ ವೈರಸ್ ಸೋಂಕಿನಿಂದ ಮುಕ್ತವಾದ ಮೊದಲ ದೇಶ ನ್ಯೂಜಿಲೆಂಡ್ ಆಗಿದೆ. ಅಲ್ಲದೆ ಅಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳು ಇಲ್ಲ. ನ್ಯೂಜಿಲೆಂಡ್ ಮತ್ತು ಭಾರತಕ್ಕೆ ಏಳುವರೆ ಗಂಟೆಗಳ ವ್ಯತ್ಯಾಸವಿದೆ. ಅಲ್ಲಿ 12,30ಕ್ಕೆ ಪಂದ್ಯವನ್ನು ನಡೆಸಿದ್ರೆ ಭಾರತೀಯ ಅಭಿಮಾನಿಗಳು ಹಾಯಾಗಿ ಪಂದ್ಯವನ್ನೂ ವೀಕ್ಷಣೆ ಮಾಡಬಹುದಾಗಿದೆ. ಇನ್ನೂ ಹ್ಯಾಮಿಲ್ಟನ್ ಮತ್ತು ಆಕ್ಲಂಡ್ ನಲ್ಲಿ ಪಂದ್ಯಗಳನ್ನು ನಡೆಸಿದ್ರೆ ಬಸ್ನಲ್ಲೇ ಪ್ರಯಾಣ ಬೆಳೆಸಬಹುದಾಗಿದೆ. ಆದ್ರೆ ವೆಲ್ಲಿಂಗ್ಟನ್, ಕ್ರೈಸ್ಟ್ಚರ್ಚ್, ನೇಪಿಯರ್, ಡುನ್ಡಿನ್ನಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಿದ್ರೆ ವಿಮಾನದಲ್ಲೇ ಪ್ರಯಾಣ ಬೆಳೆಸಬೇಕಾಗುತ್ತದೆ.
ಆದ್ರೆ ಯಾವುದಕ್ಕೂ ಬಿಸಿಸಿಐ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಸಭೆಯನ್ನು ನಡೆಸಿಲ್ಲ. ಅದೂ ಅಲ್ಲದೆ ಐಪಿಎಲ್ಗೆ ಪ್ರಾಯೋಜಕತ್ವವನ್ನು ನೀಡುತ್ತಿರುವ ವಿವೋ ಕಂಪೆನಿಯ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಗೆ ಹಲವಾರು ಅವಕಾಶಗಳಿವೆ. ಹೀಗಾಗಿ ಟೂರ್ನಿ ನಡೆಯುವ ಸಾಧ್ಯತೆ ದಟ್ಟವಾಗಿದೆ.