ಬೆಂಗಳೂರು: ರಚಿನ್ ರವೀಂದ್ರ (Rachin Ravindra) ಸಿಡಿಸಿದ ಶತಕ ಹಾಗೂ ಟಿಮ್ ಸೌಥಿ (Tim Southee) ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 402 ರನ್ ಗಳಿಸಿದೆ.
ಈ ಮೂಲಕ ಭಾರತದ ವಿರುದ್ಧ 356 ರನ್ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ (New zealand) ತಂಡವು ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 350ಕ್ಕೂ ಅಧಿಕ ರನ್ ಗಳ ಮುನ್ನಡೆ ಕಾಯ್ದುಕೊಂಡ ಸಾಧನೆ ಮಾಡಿದೆ.
ನ್ಯೂಜಿಲೆಂಡ್ ತಂಡವು ತನ್ನ 3ನೇ ದಿನ ಉತ್ತಮ ಪ್ರದರ್ಶನ ನೀಡಿತು. 134 ರನ್ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ಕಿವೀಸ್ ಮುಂದಿನ 99 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ ಉತ್ತಮ ಆಟ ಪ್ರದರ್ಶಿಸಿದರು.
132 ಎಸೆತಗಳಲ್ಲಿ ಈ ಜೋಡಿ 137 ರನ್ ಗಳಿಸಿತು. ವೇಗಿ ಮೊಹಮ್ಮದ್ ಸಿರಾಜ್ ಟಿಮ್ ಸೌಥಿ ಅವರನ್ನು ಪೆವಿಲಿಯನ್ಗಟ್ಟುವ ಮೂಲಕ ಇವರಿಬ್ಬರ ಆರ್ಭಟಕ್ಕೆ ಬ್ರೇಕ್ ಹಾಕಿದರು. ಕೊನೆಯವರೆಗೂ ಹೋರಾಡಿದ ರಚಿನ್ ರವೀಂದ್ರ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು.
ಇನ್ನಿಂಗ್ಸ್ನಲ್ಲಿ ಕಿವೀಸ್ ಪರ ರಚಿನ್ ರವೀಂದ್ರ ಭರ್ಜರಿ 137 ರನ್ (157 ಎಸೆತ, 13 ಬೌಂಡರಿ, 4 ಸಿಕ್ಸರ್) ಗಳಿಸಿದರು. ಡಿವೋನ್ ಕಾನ್ವೆ 91 ರನ್ (105 ಎಸೆತ, 3 ಸಿಕ್ಸರ್, 11 ಬೌಂಡರಿ), ಟಿಮ್ ಸೌಥಿ 65 ರನ್ (73 ಎಸೆತ, 5 ಬೌಂಡರಿ, 4 ಸಿಕ್ಸರ್), ವಿಲ್ ಯಂಗ್ 33 ರನ್, ಟಾಮ್ ಲಾಥಮ್ 15 ರನ್, ಡೇರಿಲ್ ಮಿಚೆಲ್ 18 ರನ್, ಗ್ಲೆನ್ ಫಿಲಿಪ್ಸ್ 14 ರನ್, ಮ್ಯಾಟ್ ಹೆನ್ರಿ 8 ರನ್, ಆಜಾಜ್ ಪಟೇಲ್ 4 ರನ್, ಟಾಮ್ ಬ್ಲಂಡೆಲ್ 5 ರನ್ ಗಳಿಸಿದರು.