ಮುಲ್ತಾನ್: ಇತ್ತೀಚೆಗೆ ಕಳಪೆ ಬೌಲಿಂಗ್, ಬ್ಯಾಟಿಂಗ್ ನಿಂದಾಗಿ ಸರಣಿ ಸೋಲು ಕಾಣುತ್ತಿದ್ದ ಪಾಕಿಸ್ತಾನ್ ತಂಡ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಗೆಲುವಿನ ನಗೆ ಬೀರಿದೆ.
ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 152 ರನ್ ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 1-1 ಅಂತರದಲ್ಲಿ ಸರಣಿ ಸಮಬಲ ಮಾಡಿಕೊಂಡಿದೆ. ಈ ಮೂಲಕ 1,338 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಗೆಲುವು ದಾಖಲಿಸಿದೆ.
ಅನುಭವಿ ಆಟಗಾರರನ್ನು ಏಕಾಏಕಿ ತಂಡದಿಂದ ಹೊರಗಿಟ್ಟಿರುವುದು ತಂಡದ ಮೇಲೆ ಮಾತ್ರವಲ್ಲದೇ ಪಾಕಿಸ್ತಾನದ ಕ್ರಿಕೆಟ್ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಆದರೆ ಯಾವುದಕ್ಕೂ ಸೊಪ್ಪು ಹಾಕದ ಪಿಸಿಬಿ ಹೊಸ ಆಟಗಾರರ ಮೇಲೆ ಭರವಸೆ ಇಟ್ಟಿತ್ತು. ಈಗ ಆ ಭರವಸೆಯನ್ನು ಹೊಸ ಆಟಗಾರರು ಉಳಿಸಿಕೊಂಡಿದ್ದಾರೆ.
ಪಾಕ್ ತಂಡದ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ನೂಮನ್ ಅಲಿ ಕೈಚಳಕದಿಂದಾಗಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಗೆದ್ದಿದೆ.