ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಇನ್ನು ಮುಂದೆ ಬರಲಿದೆ ಹೊಯ್ಸಳ
ಬೆಂಗಳೂರು, ಜುಲೈ 7: ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಹಾಟ್ ಸ್ಪಾಟ್ ಆಗಿದೆ. ನಿಯಂತ್ರಣಕ್ಕೆ ಸಿಗದೇ ವ್ಯಾಪಕವಾಗಿ ಹರಡುತ್ತಿರುವ ಸೋಂಕಿಗೆ ಮೂಗುದಾರ ಹಾಕಲು ಬೆಂಗಳೂರು ಪೊಲೀಸರು ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಮರೆತವರನ್ನು ಎಚ್ಚರಿಸುವ ಕೆಲಸ ಮಾಡಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಯ್ಸಳದ ನೆರವು ಪಡೆದು ಕೊಂಡು, ಸಾರ್ವಜನಿಕವಾಗಿ ಯಾರಾದರೂ ಮಾಸ್ಕ್ ಧರಿಸದೇ , ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ನಿಮ್ಮ ಗಮನಕ್ಕೆ ಬಂದರೆ ಕಂಡುಬಂದರೆ ಕೂಡಲೇ 100ಕ್ಕೆ ಕರೆ ಮಾಡಿ ಎಂದು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಬೆಂಗಳೂರಿನ ಜನತೆಗೆ ಹೀಗೊಂದು ಆಶ್ವಾಸನೆ ನೀಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ 36 ಗಂಟೆಗಳ ಕೊರೊನಾ ಲಾಕ್ಡೌನ್ಗೆ ಬೆಂಗಳೂರು ಸ್ಪಂದಿಸಿದ ರೀತಿಗೆ ಬೆಂಗಳೂರು ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಎಲ್ಲರ ನೆರವಿನೊಂದಿಗೆ ನಾವು ಮಾಸ್ಕ್ ಧರಿಸುವುದನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಇನ್ನೂ ಸ್ವಲ್ಪ ಬಿಗಿಗೊಳಿಸೋಣ. ಸಾರ್ವಜನಿಕವಾಗಿ ಯಾರಾದರೂ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದಲ್ಲಿ ಕೂಡಲೇ 100ಕ್ಕೆ ಕರೆ ಮಾಡಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ಸಹಾಯಕ್ಕೆ ಹೊಯ್ಸಳ ಬಂದು ನಿಲ್ಲಲಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ ಎಂದು ಟ್ವೀಟ್ ನಲ್ಲಿ ಕೋರಿದ್ದಾರೆ.








