ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ (Gauri Lankesh) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಪಂಗರ್ಕರ್ ಗೆ (Shrikant Pangarkar) ಪಕ್ಷದ ಯಾವುದೇ ಹುದ್ದೆ ನೀಡದಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra assembly polls) ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಶ್ರೀಕಾಂತ್ ಪಂಗರ್ಕರ್ ಪಕ್ಷದ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
2011 ರಲ್ಲಿ ಅವಿಭಜಿತ ಶಿವಸೇನೆಯಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ನಂತರ ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದ್ದ ಶ್ರೀಕಾಂತ್ ಮರಳಿ ಶಿಂಧೆ ಬಣದ ಶಿವಸೇನೆ ಸೇರಿದ್ದಾರೆ. ಪಕ್ಷಕ್ಕೆ ಮರಳಿದ ನಂತರ ಶ್ರೀಕಾಂತ್ ಪಗರ್ಕರ್, ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಈಗ ಪಕ್ಷದ ಹುದ್ದೆ ನೀಡಿದ್ದರೆ, ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಶಿವಸೇನೆಯ ಭಾನುವಾರ ಪ್ರಕಟಣೆಯಲ್ಲಿ ಹೇಳಿದೆ.
ಗೌರಿ ಲಂಕೇಶ್ ಅವರನ್ನು 2017ರ ಸೆ.5ರಂದು ಬೆಂಗಳೂರಿನಲ್ಲಿ ಅವರ ಮನೆಯ ಹೊರೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು. ಶ್ರೀಕಾಂತ್ ಪಂಗರ್ಕರ್ ನನ್ನು 2018ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಹೈಕೋರ್ಟ್ (High Court) ಜಾಮೀನು (Bail ನೀಡಿದೆ.