ಬೆಂಗಳೂರು, ಜುಲೈ 7: ಸಿದ್ದರಾಮಯ್ಯ ಅವರು ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದು, ಅವರು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿಯ ಪರಿಶೀಲನೆ ಮಾಡುವುದಾದರೆ ಅದಕ್ಕೆ ಅಗತ್ಯವಾದ ವ್ಯವಸ್ಥೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಜಗಜೀವನರಾಂ ಪ್ರತಿಮೆಗೆ ಜಗಜೀವನರಾಂ ಪುಣ್ಯತಿಥಿ ಅಂಗವಾಗಿ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ವೈ, ಇಷ್ಟು ದಿನ ಸಿದ್ದರಾಮಯ್ಯ ಅವರು ಮಾಡಿದ ಟೀಕೆಗಳನ್ನು ಕೇಳಿಸಿಕೊಂಡು ಮೌನವಹಿಸಿದ್ದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಹಗರಣವಾಗಿಲ್ಲ. ಬೇಕಿದ್ದರೆ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದು ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಬಿ.ಎಸ್.ವೈ ಸವಾಲು ಹಾಕಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಲೋಪದೋಷ ಕಂಡು ಬಂದಲ್ಲಿ ಅಥವಾ ಯಾರೇ ತಪ್ಪು ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.