ಧಾರವಾಡ : ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಪ್ರತಿಭೆಗಳನ್ನು ಮುಕ್ತ ನೆಲೆಯಲ್ಲಿ ಗುರುತಿಸಿ ಪ್ರೋತ್ಸಾಹ ನೀಡಿ ಪುರಸ್ಕರಿಸುವ ಅಗತ್ಯವಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಮ್ಮ ಶ್ರೀಮಠದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಮ್ಮಿನಬಾವಿಯ ಶ್ರೀಮತಿ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25ನೆಯ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಹಾಗೂ ಕಲೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಾ ಸ್ಪರ್ಧೆಗಳಲ್ಲಿ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಒಳಗಾಗದೇ ನ್ಯಾಯಯುತವಾಗಿ ತೀರ್ಪು ನೀಡಿ ಶಾಲಾ ಮಕ್ಕಳ ಪ್ರತಿಭಾ ವಿಕಾಸಕ್ಕೆ ನಾಲ್ಕೂ ನಿಟ್ಟಿನಿಂದ ಪ್ರೋತ್ಸಾಹಿಸಬೇಕು ಎಂದರು.
ಧಾರವಾಡ ಗ್ರಾಮೀಣ ಬಿಇಓ ರಾಮಕೃಷ್ಣ ಸದಲಗಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವನ್ನೇ ಕೇಂದ್ರೀಕರಿಸಿ ನಡೆಸಲಾಗುವ ಈ ಸ್ಪರ್ಧೆಗಳು ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ನಡೆಯುವಂತೆ, ಜೊತೆಗೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಗುರುತಿಸಲು ತಾವು ಈ ಸ್ಪರ್ಧೆಗಳ ಉಸ್ತುವಾರಿ ಸಿಬ್ಬಂದಿ ಸಭೆ ನಡೆಸಿ ಎಲ್ಲಾ ರೀತಿಯ ಸೂಚನೆಗಳನ್ನು ನೀಡಿದ್ದಾಗಿ ನುಡಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ತಿದಿ, ಸದಸ್ಯರುಗಳಾದ ಮೌನೇಶ ಪತ್ತಾರ ಮತ್ತು ಮಂಜುನಾಥ ಹೂಲಿ, ಶ್ರೀಗುರುಶಾಂತಲಿಂಗ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರುಗಳಾದ ಬಿ.ಸಿ. ಕೊಳ್ಳಿ ಹಾಗೂ ವ್ಹಿ. ಬಿ. ಕೆಂಚನಗೌಡರ, ಬಿಆರ್‌ಸಿ ಸಮನ್ವಯಾಧಿಕಾರಿ ಕುಮಾರ ಕೆ.ಎಫ್., ಶಿಕ್ಷಣ ಸಂಯೋಜಕರುಗಳಾದ ಶ್ರೀಕಾಂತ್ ಗೌಡ ಮತ್ತು ಬಸವರಾಜ ಛಬ್ಬಿ, ದೈಹಿಕ ಶಿಕ್ಷಣ ಪರಿವೀಕ್ಷಕ ಈಶ್ವರ ಆಯಟ್ಟಿ, ಸಿ.ಆರ್.ಪಿ. ಬಸವರಾಜ ಕುರಗುಂದ, ರಾಜಶೇಖರ ಹೊನ್ನಪ್ಪನವರ, ಅಜಿತಕುಮಾರ ದೇಸಾಯಿ, ಶಂಕರ ಘಟ್ಟಿ, ಎನ್. ಎಸ್. ಕಮ್ಮಾರ, ಕೃಷ್ಣಾ ಬೊಂಗಾಳೆ, ಟಿ.ಎಂ. ದೇಸಾಯಿ, ಮಂಜುಳಾ ದೊಡಮನಿ, ಎಂ.ಎನ್. ಆಲದಕಟ್ಟಿ, ವಿನಾಯಕ ಹಿರೇಮಠ, ಎಂ. ಆಂಜನೇಯ ಇದ್ದರು.
54 ಸ್ಪರ್ಧೆಗಳು : 1 ರಿಂದ 4 ನೆಯ ತರಗತಿ ವಿಭಾಗದಲ್ಲಿ 15, 5 ರಿಂದ 7ನೆಯ ತರಗತಿ ವಿಭಾಗದಲ್ಲಿ 18 ಹಾಗೂ 8 ರಿಂದ 10ನೆಯ ತರಗತಿ ವಿಭಾಗದಲ್ಲಿ 21 ಸೇರಿ ಒಟ್ಟು 54 ಸ್ಪರ್ಧೆಗಳು ಜರುಗಿದವು. ಆತಿಥೇಯ ಶಾಲೆಯಾದ ಅಮ್ಮಿನಬಾವಿಯ ಶ್ರೀಮತಿ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಉಪಹಾರ, ಚಹಾ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿತ್ತು.