ನಟ, ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಮಾದನಾಯಕಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದಿಂದಾಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್ (52) ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಮೃತದೇಹ ಅಪಾರ್ಟ್ಮೆಂಟ್ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನ. 2ರಂದು ಗುರುಪ್ರಸಾದ್ ಅವರ ಹುಟ್ಟು ಹಬ್ಬವಿತ್ತು. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ನೀಡಿದೆ.
ಮೂರು ದಿನಗಳ ಹಿಂದೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದ್ದರು. 2009 ರಲ್ಲಿ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿದ್ದರು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತ್ತು. ಆನಂತರ ಹಲವಾರು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದರು.