ಬೆಂಗಳೂರು: ಕಾಂಗ್ರೆಸ್ ನ ಕೆಟ್ಟ ಆಡಳಿತಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಉಪ ಚುನಾವಣೆಯಲ್ಲಿ ನಮ್ಮ ಗೆಲುವು ಶತಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮ್ಮಕ್ಕಿನಿಂದ ಜಮೀರ್ ಅಹ್ಮದ್ (Zameer Ahmed) ರೈತರ ಜಮೀನಿಗೆ ಕನ್ನ ಹಾಕಿದ್ದಾರೆ. ಈ ವಿಚಾರದಲ್ಲಿ ರಾಜ್ಯದ ರೈತರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ನಮಗೆ ಮತದಾರ ಆಶೀರ್ವಾದ ಮಾಡುತ್ತಾರೆ ಎಂದಿದ್ದಾರೆ.
3 ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ (Shiggaon) ಕ್ಷೇತ್ರದಲ್ಲಿ ಬಿಜೆಪಿ (BJP) ಈಗಾಗಲೇ ಗೆದ್ದಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲಿ (Sandur) ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್‍ನವರು ಗೆದ್ದೇ ಗೆಲ್ಲುವ ಭ್ರಮೆಯಲ್ಲಿದ್ದರು. ಈಗ ಮತದಾರ ನಮ್ಮತ್ತ ಬಂದಿದ್ದಾರೆ ಎಂದಿದ್ದಾರೆ.
ಡಿಸಿಎಂ ಶಿವಕುಮಾರ್ (DK Shivakumar) ಅವರ ತಗ್ಗಿ ಬಗ್ಗಿ ನಡೆಯಬೇಕೆಂಬ ಹೇಳಿಕೆ ಕುರಿತು ಮಾತನಾಡಿದ ಅವರು, ಅಧಿಕಾರದ ದರ್ಪ ಈ ರೀತಿ ಮಾಡಿಸುತ್ತದೆ. ಈ ಕಾಂಗ್ರೆಸ್ ಸರ್ಕಾರ ಮತ್ತು ಸಚಿವರ ನಡವಳಿಕೆ ನೋಡಿದರೆ ಅಧಿಕಾರದ ದರ್ಪದಿಂದ ಈ ರೀತಿ ಮಾತುಗಳು ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.