ಈ ವರ್ಷ ರಾಜ್ಯದಲ್ಲಿ ಮಳೆರಾಯ ಹೆಚ್ಚಾಗಿಯೇ ಸುರಿದಿದ್ದಾನೆ. ಪರಿಣಾಮ ಹಲವೆಡೆ ಅತಿವೃಷ್ಟಿ ಕೂಡ ಉಂಟಾಗಿದೆ. ಸಾಕಷ್ಟು ಅವಾಂತರಗಳು ನಡೆದಿವೆ. ಆದರೆ, ಈ ತಿಂಗಳಿಂದ ಮಳೆ ಕಡಿಮೆಯಾಗಬೇಕಿತ್ತು. ಆದರೂ ಕಡಿಮೆಯಾಗುತ್ತಿಲ್ಲ. ಹಲವೆಡೆ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಶನಿವಾರ ಹಾಗೂ ಭಾನುವಾರ ಸೇರಿದಂತೆ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮತ್ತೆ ಚಂಡಮಾರು ಬೀಸಿದ್ದರಿಂದಾಗಿ ಆ ಜಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ರಚನೆಯಾಗುತ್ತಿದೆ. ಹೀಗಾಗಿ ಮುಂದಿನ 2 ದಿನಗಳಲ್ಲೇ ಚಂಡಮಾರುತ ಪಶ್ಚಿಮ ಭಾಗಕ್ಕೆ ನಿಧಾನವಾಗಿ ತಮಿಳುನಾಡು ಹಾಗೂ ಶ್ರೀಲಂಕಾ ತೀರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.
ಅಲ್ಲದೇ, ರಾಜ್ಯದ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೋಮವಾರದ ನಂತರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.