ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಆರ್.ಅಶೋಕ್ ಗೂ ಕೊರೊನಾ ಭೀತಿ ಉಂಟಾಗಿದ್ದು, ಕ್ವಾರಂಟೀನ್ ಆತಂಕ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರಾಜಕಾರಣಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಎರಡು ಮೂರು ದಿನಗಳಲ್ಲಿ ಡಾ.ಭರತ್ ಶೆಟ್ಟಿ, ಡಾ.ರಂಗನಾಥ್, ಜನಾರ್ದನ ಪೂಜಾರಿ, ಡಾ.ರಂಗನಾಥ್, ಪ್ರಾಣೇಶ್ ಮತ್ತು ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಗುರುವಾರ ವಿಧಾನಸೌಧದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆ ಸಭೆ ನಡೆಸಿದ್ದರು. ಆ ಸಭೆಯಲ್ಲಿ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರ ಜೊತೆಗೆ ಸಿಎಂ ಯಡಿಯೂರಪ್ಪ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ ಅಂಬರೀಶ್ ಸ್ಮಾರಕಕ್ಕೆ ಒಪ್ಪಿಗೆ ಸೂಚಿಸಿ, ₹5 ಕೋಟಿ ರೂಪಾಯಿ ಬಿಡುಗಡೆಗೊಳಿಸಿದ ಆದೇಶದ ಪ್ರತಿಗೆ ಸುಮಲತಾ ಅಂಬರೀಶ್ ಸಹಿ ಹಾಕಿದ್ದ ಪೆನ್ನಿನಲ್ಲೇ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಸಿಎಂ ಯಡಿಯೂರಪ್ಪ ಕೂಡ ಸಹಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಭೀತಿ ಇದ್ದು, ಕ್ವಾರಂಟೀನ್ ಆತಂಕ ಶುರುವಾಗಿದೆ ಎಂದು ಹೇಳಲಾಗಿದೆ.

ಕಂದಾಯ ಸಚಿವ ಆರ್. ಅಶೋಕ್ ಕಳೆದ ವಾರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಎಮ್.ಎಲ್.ಸಿ ಪ್ರಾಣೇಶ್ ಸೇರಿದಂತೆ ಹಲವು ನಾಯಕರನ್ನು ಸಂಪರ್ಕಿಸಿದ್ದರು. ನಿನ್ನೆ ಪ್ರಾಣೇಶ್ ಮತ್ತು ಅವರ ಪತ್ನಿಗೆ ಸೋಂಕು ತಗುಲಿರುವುದು ಸಾಬೀತಾಗಿದ್ದು, ಆರ್. ಅಶೋಕ್ ಗೆ ಕೂಡ ಕೊರೊನಾ ಭೀತಿ ಎದುರಾಗಿದೆ.








