ಬೆಂಗಳೂರು: ವಕ್ಫ್ ಪ್ರಕರಣದಿಂದಾಗಿ ರಾಜ್ಯದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ಮುಳುಗಿವೆ. ಈ ಮಧ್ಯೆ ಅಧಿಕಾರಿಗಳ ಪತ್ರ ವ್ಯವಹಾರವನ್ನು ವಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗ ಮಾಡಿದ್ದಾರೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ಬರೆದಿರುವ ಪತ್ರವನ್ನ ಬಿಜೆಪಿ (BJP) ಬಿಡುಗಡೆ ಮಾಡಿದೆ. ವಕ್ಫ್ ಆಸ್ತಿ ಸಂಬಂಧಿತ 21,767 ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ವಹಿಸುವ ಅನುಪಾಲನಾ ವರದಿ ಕೇಳಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ಬೆಂಗಳೂರು, ಮೈಸೂರು ಕಲಬುರಗಿ, ಧಾರವಾಡ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಬರೆದಿರುವ ಪತ್ರವನ್ನೇ ಅಶೋಕ್ ಬಿಡುಗಡೆ ಮಾಡಿದ್ದಾರೆ.
ವಕ್ಫ್ ಬೋರ್ಡ್ ಹಗರಣ ಕ್ಯಾನ್ಸರ್ ರೀತಿ ಹಬ್ಬುತ್ತಿದೆ. ವಕ್ಫ್ ಆಸ್ತಿಗಳ ನೋಟಿಸ್ ವಾಪಸ್‌ಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದ್ದರು. ಕಂದಾಯ ಇಲಾಖೆ ವಕ್ಫ್ ಕಾರ್ಯಪಡೆ ಸಭೆ ಪ್ರಗತಿ ಸಾಧನೆ ಬಗ್ಗೆ ಪತ್ರ ಕಳುಹಿಸಿದೆ. 21,767 ಪ್ರಕರಣಗಳಲ್ಲಿ ಅಗತ್ಯ ಕ್ರಮವಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದಿದೆ. ವಕ್ಫ್ ಖಾತೆ ಬದಲಾವಣೆ ಬಗ್ಗೆ ಮತ್ತೊಮ್ಮೆ ವರದಿ ಸಲ್ಲಿಸಿ ಎಂದು ಪತ್ರ ಬರೆದಿದ್ದಾರೆ. ಸಿಎಂ ಹೇಳಿದ ಮೇಲೂ ಪತ್ರ ಬರೆದಿದ್ದಾರೆ. ಕಳೆದ ನವೆಂಬರ್ 7 ರಂದು ಈ ಪತ್ರವನ್ನ ಬರೆಯಲಾಗಿದೆ ಎಂದು ಆರೋಪಿಸಿರುವ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.