ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಶಾಕ್ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಧಾರವಾಡ, ಬೀದರ್, ಬೆಳಗಾವಿ, ದಾವಣಗೆರೆ, ಗದಗ ಜಿಲ್ಲೆಗಳು ಸೇರಿದಂತೆ ಹಲೆವೆಡೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ದಾವಣಗೆರೆಯ ಶಕ್ತಿನಗರದಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಲ್ಲದೇ, ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೇ ನೇತೃತ್ವದಲ್ಲಿ ದಾಳಿ ನಡೆದಿದೆ.
ಧಾರವಾಡದಲ್ಲಿ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ನಿವಾಸ, ಸೇರಿದಂತೆ ಆಪ್ತರ ನಿವಾಸದ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋವಿಂದಪ್ಪ ಭಜಂತ್ರಿಗೆ ಸಂಬಂಧಪಟ್ಟ 6 ಪ್ರದೇಶಗಳ ಮೇಲೆ ದಾಳಿ ನಡೆದಿದೆ.
ಬೀದರ್ನಲ್ಲಿ ಎರಡು ಕಡೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ್ದಾರೆ. ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.