ಚಿಕ್ಕೋಡಿ: ಬೇಕಾಬಿಟ್ಟಿಯಾಗಿ ಲಾರಿ ಓಡಿಸಿಕೊಂಡು ಹೋಗುತ್ತಿದ್ದ ಲಾರಿ ಚಾಲಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಬೆನಕೋಳಿ ಗ್ರಾಮದ ಹತ್ತಿರ ನಡೆದಿದೆ. ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಸಾವನ್ನಪ್ಪಿದ ಚಾಲಕ. ಚಾಲಕನು ಲಾರಿಯನ್ನು ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ. ಈ ಸಂದರ್ಭದಲ್ಲಿ ಬೈಕ್, ಕ್ಯಾಂಟರ್‌ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ. ಪರಸಪ್ಪ ಎಂಬುವವರಿಗೆ ಸೇರಿದ ಬೈಕ್ ಹಾಗೂ ಹನುಮಂತ ಎಂಬುವವರಿಗೆ ಸೇರಿದ ಕ್ಯಾಂಟರ್ ಗೆ ಗುದ್ದಿದ್ದ.
ಆದರೆ, ಗಾಬರಿಯಲ್ಲಿ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ. ಹೀಗಾಗಿ ಬೆನ್ನತ್ತಿ ಕಾಟಬಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹನುಮಂತ ತಡೆದಿದ್ದರು. ಅಲ್ಲದೇ, ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರೊಂದಿಗೆ ಸೇರಿ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ತೆರಳಿದಾಗ ಅಜೀಂ ಮರ್ಮಾಂಗಕ್ಕೆ ಒದ್ದು, ಐವರು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಚಾಲಕ ತೀವ್ರವಾಗಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಬೆಳಗಾವಿ ಬೀಮ್ಸ್ ಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹನುಮಂತನಿಗೆ ಹಾಳಪ್ಪ ಹಳ್ಯಾಗೋಳ, ಈರಪ್ಪ ನಾಯಿಕ್, ಅಮಿತ್ ಶಿಂಧೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಚಾಲಕನ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಯಮಕನಮರಡಿ ಪೊಲೀಸರು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ (Hindalga Jail) ಕಳುಹಿಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








