ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳುರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರಿಂದ ಸಿದ್ದರಾಮಯ್ಯ ಸಾಕ್ಷಿ ಕೇಳ್ತಾರೆ, ಅವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು. ಈಗ ಅದು ಕುಸಿದಿದೆ ಎಂದು ಗುಡುಗಿದ್ದಾರೆ.
ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ. ತಪ್ಪು ಮಾಡಿಲ್ಲ ಎಂದು ಸೈಟು ವಾಪಸ್ ಕೊಟ್ಟರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಹೀಗಾಗಿ ಇನ್ನು ಮುಂದೆ ಅವರು ಸುಳ್ಳು ರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದಿದ್ದಾರೆ.
ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಟಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ರಾಜ್ಯದಲ್ಲಿ ಕನ್ನ ಹಾಕುವ ಮಂತ್ರಿಗಳು ಇದ್ದಾರೆ. ನನ್ನ ಮುಟ್ಟಿ ನೋಡಿ, ಕೇಸ್ ಹಾಕಿ ನೋಡಿ, ಸಿಎಂ ಪದವಿಯಿಂದ ಇಳಿಯುವುದಿಲ್ಲ ಎಂದು ಅವರ ಹೈಕಮಾಂಡ್ಗೆ ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಅಂದ ಮೇಲೆ ಯಾಕೆ ಹೀಗೆ ಹೇಳುತ್ತೀರಾ? 14 ಸೈಟ್ಗಳನ್ನು ಯಾಕೆ ವಾಪಸ್ಸು ಕೊಟ್ಟಿದೀರಿ? ಎಂದು ಪ್ರಶ್ನಿಸಿದ್ದಾರೆ.
ಈಗ ಕಾಂಗ್ರೆಸ್ ಬಿಪಿಎಲ್ ಕಾರ್ಡುಗಳನ್ನು (BPL Card) ಸರ್ಕಾರ ರದ್ದು ಮಾಡಲು ಹೊರಟಿದೆ. ಎಪಿಎಲ್ಗೆ ಈಗಾಗಲೇ ಒಂದು ಲಕ್ಷ ಕಾರ್ಡ್ಗಳನ್ನು ಪರಿವರ್ತನೆ ಮಾಡಿದ್ದಾರೆ. ಇದು ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ ಈ ಕೆಲಸ ಮಾಡುತ್ತಿದ್ದಾರೆ. ಉಚಿತ ಗ್ಯಾರಂಟಿಗಳಲ್ಲಿ ಪ್ರತೀ ವರ್ಷ 10% ಕಡಿತ ಮಾಡಲು ಅಧಿಕಾರಿಗಳಿಗೆ ಸರ್ಕಾರ ಟಾರ್ಗೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.








