ಜನನ ಕ್ರೈಸ್ತರಾಗಿ, ಬದುಕು ಇಸ್ಲಾಂಗೆ ಶರಣಾಗಿ, ಮರಣಾನಂತರ ಸಂಸ್ಕಾರ ಮಾತ್ರ ಹಿಂದೂ ಪದ್ಧತಿಯಂತೆ; ಮಡಿಕೇರಿಯಲ್ಲೊಂದು ವಿಶಿಷ್ಟ ಘಟನೆ..
ಮಡಿಕೇರಿ: ಚಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾತನಾಡುತ್ತಾ ಎಲ್ಲಾ ನದಿಗಳೂ ಸಾಗರ ಸೇರುವಂತೆ ಜಗತ್ತಿನ ಎಲ್ಲಾ ಮತಧರ್ಮಗಳು ಅಂತಿಮವಾಗಿ ಹಿಂದೂ ಧರ್ಮದ ಧ್ಯೇಯವನ್ನು ಸೇರುತ್ತವೆ ಎಂದಿದ್ದರು. ಅಂದು ಅವರು ಮಾತನಾಡಿದ ಆ ವಿಚಾರಕ್ಕೆ ಪೂರಕವೆನ್ನುವ ಘಟನೆಯೊಂದು ಮಡಿಕೇರಿಯ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ
ಕ್ರೈಸ್ತ ಕುಟುಂಬದಲ್ಲಿ ಜನಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವರ್ಗೀಸ್ ಯಾನೆ ಯೂಸೂಫ್ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದರು. ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಬಾರದ ಹಿನ್ನೆಲೆಯಲ್ಲಿ ನಾಗರಿಕರು ಶವದ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ಪ್ರಕಾರ ನಡೆಸಿದ ಘಟನೆ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ
ಯೂಸುಫ್ ಅಲಿಯಾಸ್ ವರ್ಗೀಸ್, ಗೋಪಾಲಪುರ ಗ್ರಾಮದ ನಿವಾಸಿ 68 ವರ್ಷದ ಇವರು ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಜು.4ರಂದು ಮೃತಪಟ್ಟಿದ್ದರು. ಆದರೆ ಅಂತ್ಯಕ್ರಿಯೆಗೆ ಸಂಬಂಧಿಕರು ಮುಂದಾಗದ ಹಿನ್ನೆಲೆಯಲ್ಲಿ ಅನಾಥ ಶವ ಎಂದು ಪರಿಗಣಿಸಿ ಶವಾಗಾರದಲ್ಲಿ ಇರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕೊಡಲಾಗಿತ್ತು. ಮಾಹಿತಿ ಆಧರಿಸಿ ಗೋಪಾಲಪುರದ ಸ್ಥಳೀಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯವರು ಮೃತರ ಮನೆಯವರಿಗೆ ಮಾಹಿತಿ ನೀಡಿದರೂ ಅವರು ಶವ ಸಂಸ್ಕಾರ ಮಾಡಲು ಮುಂದಾಗಲಿಲ್ಲ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಗೋಪಾಲಪುರ ಗ್ರಾಮಕ್ಕೆ ತಂದು ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಮೃತ ವ್ಯಕ್ತಿಗೆ ಮಂಗಳೂರಿನಲ್ಲಿ ಪತ್ನಿ, ಮಕ್ಕಳು, ಸಂಬಂಧಿಕರು ಇದ್ದರೂ ಅಂತ್ಯಕ್ರಿಯೆಗೆ ಮುಂದಾಗಿರಲಿಲ್ಲ. ಮಾಹಿತಿ ತಿಳಿದ ಬಳಿಕವೂ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಮೂಲತ: ಕ್ರೈಸ್ತ ಕುಟುಂಬದಲ್ಲಿ ಜನಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವರ್ಗೀಸ್ ಅವರು ಯೂಸೂಫ್ ಎಂಬ ಹೆಸರಿನಿಂದ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದರು. ಆದರೆ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿದೆ.
ಜಾತಿ, ಧರ್ಮದ ಮಾನವ ನಿರ್ಮಿತ ಕಂದಕದಲ್ಲಿ ಮಾನವೀಯತೆ ಇನ್ನು ನೆಲೆಸಿದೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿ








