ರಾಮನಗರ: ಚನ್ನಪಟ್ಟಣದಲ್ಲಿ (Channapatna) ಕಾಂಗ್ರೆಸ್ ಗೆಲ್ಲುವುದಕ್ಕಾಗಿ ಬಿಜೆಪಿಯವರು ಕೂಡ ಸಪೋರ್ಟ್ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆಲುವಿಗಾಗಿ ಹಲವರು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂದ್ರು, ಇದರ ಅರ್ಥ ಏನು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಮೇಲೆ ಈಗ ಕ್ಷೇತ್ರದ ಜನರ ಸಾಲ ಇದೆ. ಹೀಗಾಗಿ ಅವರ ಪರವಾಗಿ ನಾವು ನಿಲ್ಲುತ್ತೇವೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಗುರಿ. ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ, ನಮ್ಮೆಲ್ಲ ನಾಯಕರು, ಮತದಾರಿಗೆ ಸಲ್ಲಬೇಕು. ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಕಾರ್ಯಗಳನ್ನು ಇಲ್ಲಿ ಮಾಡಲಾಗಿತ್ತು. ಮುಂದೆ ಅಭಿವೃದ್ಧಿ ಕೆಲಸಗಳಿಗೆ ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಗೆ ಕ್ಷೇತ್ರದಲ್ಲಿ 16 ಸಾವಿರ ಮತಗಳಿದ್ದವು. ಆದರೆ, ಈಗ ಗೆಲುವಿನ ಅಂತರ 25 ಸಾವಿರ ಆಗಿದೆ. ಇದು ನಮ್ಮ ಅಭೂತಪೂರ್ವ ಸಾಧನೆಯೇ ಸರಿ ಎಂದಿದ್ದಾರೆ.








