ಹಾಸನ: ಯುವಕನೊಬ್ಬ ಕುಡಿದ ಮತ್ತಿನಲ್ಲಿ ಮದುವೆಗೆ ನಿರಾಕರಿಸಿದ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ಹಾಸನದ (Hassan) ಆಲೂರು ಪಟ್ಟಣದಲ್ಲಿ ನಡೆದಿದೆ. ಆಲೂರಿನ ಕಾರಗೋಡು ಗ್ರಾಮದ ಮೋಹಿತ್ ಹಾಗೂ ಯುವತಿಯೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಯುವತಿ, ಮೋಹಿತ್ ನಿಂದ ದೂರವಾಗಿದ್ದರು. ಇದಕ್ಕೆ ಕೋಪಗೊಂಡಿದ್ದ ಯುವಕ, ಮದುವೆಗೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಯುವಕನ ಕಾಟದಿಂದ ಬೇಸತ್ತಿದ್ದ ಯುವತಿ, ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ನಂತರ ಕುಟುಂಬಸ್ಥರು ಸೇರಿಕೊಂಡು ರಾಜಿ ಮಾಡಿ, ತಂಟೆಗೆ ಬಾರದಂತೆ ನೋಟರಿ ಮಾಡಿಸಲು ಮುಂದಾಗಿದ್ದರು. ಈ ವೇಳೆ ಯುವಕ ಪಾನಮತ್ತನಾಗಿ ಬಂದು ಯುವತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ, ಪರಾರಿಯಾಗಿದ್ದಾನೆ.
ದಾಳಿಯಿಂದ ಯುವತಿಯ ತಲೆ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








