ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಸ್ವಲ್ಪ ಹೊತ್ತಿನವರೆಗೆ ಮಾತ್ರ ಸಾಧ್ಯ ಅದರಲ್ಲೂ ಮಕ್ಕಳ ಗಮನ ಹಿಡಿದಿಡುವುದು ಬಹಳ ಕಷ್ಟ. ಯೋಗಾಭ್ಯಾಸ ಮತ್ತು ಪ್ರಾಣಾಯಾಮದಿಂದ ಮಕ್ಕಳ ಏಕಾಗ್ರತೆಯ ಅವಧಿಯನ್ನು ಹೆಚ್ಚಿಸಬಹುದು. ಹಾಗದ್ರೆ ಮಕ್ಕಳಿಗೆ ಯೋಗದ ಯಾವ ಆಸಗಳು ಸೂಕ್ತ ತಿಳಿಯೋಣ…
ಸರ್ವಾಂಗಾಸನ
ತಮ್ಮ ಹಠಗಳಿಂದ ಹೆತ್ತವರನ್ನು ತಲೆಕೆಳಗಾಗಿಸುವ ಮಕ್ಕಳನ್ನೇ ತಲೆಕೆಳಗಾಗಿಸುವ ಆಸನವಿದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಿ, ಪೋಷಣೆ ದೊರೆಯುತ್ತದೆ. ತೋಳು ಮತ್ತು ಭುಜಗಳ ದೃಢತೆ ಹೆಚ್ಚುತ್ತದೆ. ಬೆನ್ನುಹುರಿ ಜಡವಾಗದಂತೆ ಮಾಡುತ್ತದೆ.
ವೀರಭದ್ರಾಸನ
ತೋಳು ಮತ್ತು ಕಾಲುಗಳ ಸ್ನಾಯುಗಳನ್ನು ಬಲಗೊಳಿಸುತ್ತದೆ. ಶರೀರದ ಸಮತೋಲನ ಹೆಚ್ಚಿಸುತ್ತದೆ. ದೇಹದ ಒಟ್ಟಾರೆ ಬಲ ಮತ್ತು ಸಾಮರ್ಥ್ಯವೂ ಅಧಿಕವಾಗುತ್ತದೆ.
ವೃಕ್ಷಾಸನ
ತೋಳು, ಕಾಲುಗಳ ದೃಢತೆ ಹೆಚ್ಚಿಸುವ ಭಂಗಿಯಿದು. ಬೆನ್ನು ಹುರಿಯ ಚಟುವಟಿಕೆಯನ್ನು ಹೆಚ್ಚಿಸಿ, ದೇಹ ಬಾಗದಂತೆ ಕಾಪಾಡುತ್ತದೆ. ಎತ್ತರ ಇರುವ ಮಕ್ಕಳ ಬೆನ್ನು ಹುರಿ ಮುಂದೆ ಬಾಗುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥದಕ್ಕೆ ಅವಕಾಶವಾಗದೆ, ಮರದಂತೆ ನೇರವಾಗಿ ಮಕ್ಕಳನ್ನು ನಿಲ್ಲಿಸುತ್ತದೆ ಈ ಭಂಗಿ.
ಶವಾಸನ
ದಿನವಿಡೀ ಚಟುವಟಿಕೆಯಿಂದ ಆದಂಥ ಆಯಾಸವನ್ನು ಪರಿಹಾರ ಮಾಡುವಲ್ಲಿ ಇದು ಪ್ರಮುಖವಾದದ್ದು. ಮನಸ್ಸನ್ನು ವಿಶ್ರಾಂತಿಯತ್ತ ದೂಡಿ, ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.