ಬೆಂಗಳೂರು: ಕೊರೊನ ತಡೆಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಹಾರ ಮುಂದುವರೆಸಿದ್ದಾರೆ.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಆರೋಪ ಮಾಡುವ ಮೊದಲು ದಾಖಲೆಗಳನ್ನು ಪರಿಶೀಲಿಸಲು ವಿಧಾನಸೌಧಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಆದರೆ, ಕಳೆದ ಮೂರು ತಿಂಗಳಲ್ಲಿ ಮಾಹಿತಿ ಕೋರಿ ಕನಿಷ್ಠ 20 ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದೇನೆ. ಮೊದಲು ಅವುಗಳಿಗೆ ಉತ್ತರ ಕೊಡಿ. ಮಾಹಿತಿ ನೀಡಲು ಯಾಕೆ ಅಂಜಿಕೆ ಎಂದು ಸವಾಲು ಹಾಕಿದ್ದಾರೆ.
ಈ ಸಂಬಂಧ ಟ್ವಿಟರ್‍ನಲ್ಲಿ ತಾವು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಕೊರೊನಾ ಕಾರಣದಿಂದಾಗಿ ವಿಧಿಸಲಾಗಿದ್ದ ಲಾಕ್‍ಡೌನ್ ಪರಿಣಾಮದಿಂದ ಸಂಕಷ್ಟ ಅನುಭವಿಸುತ್ತಿರುವ ವಿವಿಧ ವರ್ಗಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಪ್ಯಾಕೇಜ್‍ನ ಸದ್ಯದ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವಂತೆ ಜೂ.9ರಂದು ಪತ್ರ ಬರೆದಿದ್ದಾರೆ.
ಇದರಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ ಅನುದಾನ, ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದ ಅನುದಾನ, ಜಿಲ್ಲಾಡಳಿತಗಳಿಗೆ ಬಿಡುಗಡೆ ಮಾಡಿದ ಅನುದಾನ, ಇದರಲ್ಲಿ ಜಿಲ್ಲಾಡಳಿತಗಳು ಹಾಗೂ ಇಲಾಖೆಗಳು ಖರ್ಚು ಮಾಡಿದ ವಿವರಗಳು ಸೇರಿದಂತೆ ಏಪ್ರಿಲ್.1ರಿಂದ ಸರ್ಕಾರ ವಿವಿಧ ಖರ್ಚುಗಳಿಗೆ ಮಾಡಿದ ಲೆಕ್ಕವನ್ನು ನೀಡುವಂತೆ ಆಗ್ರಹಿದ್ದಾರೆ.
ರಾಜ್ಯದಲ್ಲಿನ ಟ್ಯಾಕ್ಸಿ, ರಿಕ್ಷಾ ಚಾಲಕರು ಎಷ್ಟು ಇದ್ದಾರೆ, ಇವರಲ್ಲಿ ಸರ್ಕರ ಎಷ್ಟು ಜನರಿಗೆ ಪರಿಹಾರ ನೀಡಿದೆ ಹಾಗೂ ವಿವಿಧ ಕಾರ್ಮಿಕ ಸಮುದಾಯಗಳಿಗೆ ಬಿಡುಗಡೆ ಮಾಡಿರುವ ಅನುದಾನ ಮತ್ತು ಕೈಕೊಂಡ ಕ್ರಮಗಳು, ಹೊರ ರಾಜ್ಯಕ್ಕೆ ತೆರಳಿದ ಕಾರ್ಮಿಕರ ಸಂಖ್ಯೆ ಜತೆಗೆ ಅವರ ಪ್ರಯಾಣಕ್ಕೆ ಮಾಡಿದ ವೆಚ್ಚ, ಬೇರೆ ರಾಜ್ಯ ಹಾಗೂ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಿದ ಕಾರ್ಮಿಕರ ಸಂಖ್ಯೆಯ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖರೀದಿಸಿರುವ ವೈದ್ಯಕೀಯ ಸಾಮಗ್ರಿಗಳಾದ ಪಿಪಿಇ ಕಿಟ್, ಟೆಸ್ಟ್ ಕಿಟ್, ಮಾಸ್ಕ್, ಆಮ್ಲಜನಕ ಸಿಲಿಂಡರ್, ಸ್ಯಾನಿಟೈಸರ್ ಸೇರಿದಂತೆ ಇತರೆ ವಸ್ತುಗಳ ಪ್ರಮಾಣಗಳ ಬಗ್ಗೆ ಮಾಹಿತಿ ನೀಡುವಂತೆ ಜೂ.3ರಂದೇ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.