ಮೈಸೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು.
ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿ. ನಾನೇ ಲೆಕ್ಕ ಪರಿಶೀಲಿಸುತ್ತೇನೆ. ಸರ್ಕಾರ ಪಾರದರ್ಶಕವಾಗಿದ್ದರೆ ಲೆಕ್ಕ ಕೊಡಲೇ ಬೇಕು, ಕೊಡದಿದ್ದರೆ ಬಿಡೋರ್ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಇಲ್ಲಿಗೇ ಬಿಡುವುದಿಲ್ಲ. ಲಾಜಿಕಲ್ ಎಂಡ್‍ಗೆ ತೆಗೆದು ಕೊಂಡು ಹೋಗುತ್ತೇವೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಲಾಕ್‍ಡೌನ್ ಈಗ ಅವಶ್ಯಕತೆ ಇತ್ತು
ಕೊರೊನಾ ನಿಯಂತ್ರಣಕ್ಕೆ ಏಪ್ರೀಲ್, ಮೇನಲ್ಲಿ ಮಾಡಿದ ಲಾಕ್‍ಡೌನ್ ಅಗತ್ಯ ಇರಲಿಲ್ಲ. ಈಗ ಲಾಕ್‍ಡೌನ್‍ನ ಅವಶ್ಯಕತೆ ಇದೆ. ಆದರೆ ಕಾಲ ಮಿಂಚಿದೆ. ಬೆಂಗಳೂರಿನಲ್ಲಿ ಕೊರೊನಾ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದೆ. ಜನ ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ. ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಬಡವರಿಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು. ಸರ್ಕಾರ ಆ ಕೆಲಸ ಮಾಡಲಿಲ್ಲ. ಜನ ಇದರಿಂದ ಬೆಂಗಳೂರು ಬಿಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಬೇಡ ಅಂತ ನಾನೇ ಹೇಳಿದ್ದೆ
ಸ್ವಾರ್ಥಕ್ಕಾಗಿ ಬೇರೆ ಪಕ್ಷಗಳ ಜೊತ ಸಖ್ಯ ಬೇಡ ದಿನೇಶ್ ಗುಂಡೂರಾವ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ ಅಂತ ನಾನೇ ಹೇಳಿದ್ದೆ. ಅವತ್ತೂ ಯಾರು ನನ್ನ ಮಾತು ಕೇಳಲಿಲ್ಲ. ನನ್ನದು ಅವತ್ತು ಸಿಂಗಲ್ ವಾಯ್ಸ್ ಆಗಿಬಿಡ್ತು. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ರೆ 7 ರಿಂದ 8 ಸ್ಥಾನ ಗೆಲ್ತಿದ್ವಿ ಎಂದು ತಿಳಿಸಿದ್ದಾರೆ.
ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯದ ಕಾರಣ ಎಲ್‍ಕೆಜಿಯಿಂದಲೇ ಆಲ್‍ಲೈನ್ ಶಿಕ್ಷಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬಹಳ ಜನ ತಜ್ಞರು ಆಲ್‍ಲೈನ್ ಶಿಕ್ಷಣಕ್ಕೆ ವಿರೋಧಿಸಿಲ್ಲ, ಇದರಿಂದ ವಿದ್ಯಾರ್ಥಿಗಳ ಮನೋವಿಕಾಸ ಆಗಲ್ಲ ಎಂದಷ್ಟೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.