ಕೊಪ್ಪಳ: ಅಂಜಾನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಸಾಣಾಪುರ ಹತ್ತಿರ ನಡೆದಿದೆ. ಮೃತ ಬೈಕ್ ಸವಾರನನ್ನು ಒಡಿಶಾ (Odisha) ಮೂಲದ ಲುಲ್ಲು ಲಾಲ್ (30) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವ ವ್ಯಕ್ತಿಯು ಕೊಪ್ಪಳ ತಾಲೂಕಿನ ಮೆತಗಲ್ ಬಳಿ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಾವನ್ನಪ್ಪಿರುವ ವ್ಯಕ್ತಿ ಅಂಜನಾದ್ರಿಯ ಆಂಜನೇಯ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಲುಲ್ಲು ಸೇರಿದಂತೆ ಇಬ್ಬರು ಬೆಟ್ಟಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದೆ. ಬಿದ್ದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








