ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ (SM Krishna) ನಿಧನರಾದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ, ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಬೆಳಗಾವಿಯಿಂದ ಬೆಂಗಳೂರಿನ ಸದಾಶಿವ ನಗರಕ್ಕೆ ಆಗಮಿಸಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ರಜೆ ಘೋಷಿಸಿದ್ದಾರೆ.
ನಾಳೆ ಬೆಳಗ್ಗೆ 8 ಗಂಟೆಯವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಡಲಾಗುತ್ತದೆ. ಮಂಡ್ಯ ಮೈಸೂರು ಭಾಗದ ಕೃಷ್ಣ ಅವರ ಅಭಿಮಾನಿಗಳು ಮದ್ದೂರಿಗೆ ಬಂದು ಪಾರ್ಥಿವ ಶರೀರ ವೀಕ್ಷಿಸಬಹುದು ಎಂದಿದ್ದಾರೆ.
ಮಧ್ಯಾಹ್ನ 3 ಗಂಟೆಯ ನಂತರ ಮೃತದೇಹವನ್ನು ಸ್ವಗ್ರಾಮ ಸೋಮನಹಳ್ಳಿಗೆ ತೆಗೆದುಕೊಂಡು ಹೋಗಿ ಅವರ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.








