ಉಡುಪಿ: ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna) ನಿಧನದ ಹಿನ್ನೆಲೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಸಂತಾಪ ಸೂಚಿಸಿದ್ದಾರೆ.
ಎಸ್ಎಂ ಕೃಷ್ಣ ರಾಜ್ಯ ಮತ್ತು ದೇಶಕ್ಕೆ ಉತ್ತಮ ಮಾರ್ಗದರ್ಶನ ಮಾಡಿದವರು ಎಂದು ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ. ಪೇಜಾವರ ಮಠ ಮತ್ತು ನಮ್ಮ ಗುರುಗಳ ಮೇಲೆ ಅವರಿಗೆ ವಿಶೇಷ ಅಭಿಮಾನ ಇತ್ತು. ಭಗವಂತ ಅವರ ಆತ್ಮಕ್ಕೆ ಸಕಲ ಬಗೆಯ ಶ್ರೇಯಸ್ಸು ಕರುಣಿಸಲಿ. ಕುಟುಂಬಕ್ಕೆ ವಿಯೋಗ ಸಹಿಸುವ ಸಾಮರ್ಥ್ಯ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.
ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಬೆಳೆಸಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಿ ಜೀವನದ ದಾರಿಯನ್ನು ತೆರೆದಿಡುವಲ್ಲಿ ಅವರ ದೂರದೃಷ್ಟಿಯ ಪಾತ್ರ ಸದಾ ಸ್ಮರಣೀಯ. ಸಜ್ಜನಿಕೆ, ಸಭ್ಯತೆ, ಸದಾಚಾರ ಮತ್ತು ಧರ್ಮ ಸಂಪನ್ನರಾಗಿದ್ದರು ಎಂದು ಹಾಡಿ ಹೊಗಳಿದ್ದಾರೆ. ಕೃಷ್ಣ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಎಂದು ಸ್ವಾಮೀಜಿ ಪ್ರಕಟಣೆ ಮೂಲಕ ಪ್ರಾರ್ಥಿಸಿದ್ದಾರೆ.