ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಎರಡನೇ ಪಂದ್ಯ ಗೆಲ್ಲುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಆಟಗಾರ ಜೈ ಶ್ರೀರಾಮ ಎಂದು ಘೋಷಣೆ ಕೂಗಿದ್ದು, ವೈರಲ್ ಆಗುತ್ತಿದೆ. ಭಾರತೀಯರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
2 ಟೆಸ್ಟ್ ಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. ಮೊದಲ ಪಂದ್ಯವನ್ನು 233 ರನ್ ಗಳಿಂದ ಗೆದ್ದಿದ್ದರೆ, 2ನೇ ಪಂದ್ಯವನ್ನು 109 ರನ್ ಗಳಿಂದ ಗೆದ್ದಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಎರಡನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ 347 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಶ್ರೀಲಂಕಾ ತಂಡ ಉತ್ತಮ ಪ್ರದರ್ಶನ ನೀಡಿತ್ತು. 5 ವಿಕೆಟ್ ಕಳೆದುಕೊಂಡು 200 ರನ್ ಗಳವರೆಗೆ ಆಡಿತ್ತು. ಆದರೆ ಆನಂತರ ಕುಸಿತ ಕಂಡು ಸೋಲು ಅನುಭವಿಸಿತು. ಕೇಶವ್ ಮಹಾರಾಜ್ ಸ್ಪೀನ್ ಮೋಡಿಗೆ ಶ್ರೀಲಂಕಾ ತತ್ತರಿಸಿ ಹೋಯಿತು. ಕೇಶವ್ 25 ಓವರ್ಗಳನ್ನು ಎಸೆದು 5 ವಿಕೆಟ್ ಕಬಳಿಸಿದರು.
ಈ ಗೆಲುವಿನ ನಂತರ ಕೇಶವ್ ಮಹಾರಾಜ್ ಜೈ ಶ್ರೀರಾಮ್ ಎಂದಿದ್ದಾರೆ. ಸರಣಿ ಗೆದ್ದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೇಶವ್, ಜೈ ಶ್ರೀರಾಮ್, ಜೈ ಹನುಮಾನ್ ಹ್ಯಾಷ್ ಟ್ಯಾಗ್ ಬಳಸಿ ಸಂಭ್ರಮಿಸಿದ್ದಾರೆ.
ಹಿಂದೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪಣಾ ದಿನದಂದು ಕೇಶವ್ ಮಹಾರಾಜ್ ಶುಭ ಹಾರೈಸಿದ್ದರು. ಆನಂತರ ಅಯೋಧ್ಯೆಗೆ ಭೇಟಿ ನೀಡಿದ್ದರು. ಕೇಶವ್ ಮಹಾರಾಜ್ ಪೂರ್ವಜರು ಭಾರತೀಯರು. ಹೀಗಾಗಿ ಅಲ್ಲಿಯೂ ಅವರ ಕುಟುಂಬ ಹಿಂದೂ ಸಂಪ್ರದಾಯ ಮುಂದುವರೆಸಿದ್ದಾರೆ.