ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿದ್ದ ಶಾಸಕರು, ಬೈ ಎಲೆಕ್ಷನ್ ನಲ್ಲಿ ಗೆದ್ದು ಸಚಿವರಾಗಿ ಸುಮಾರು ಮೂರು ವಾರಗಳು ಕಳೆಯುತ್ತಿವೆ. ಹೀಗಿದ್ದರೂ ಇದುವರೆಗೂ ಅವರು ಒಮ್ಮೆಯೂ ಸಹ ಸಚಿವರ ಕಚೇರಿ ಸೇರಿದಂತೆ ಬಿಜೆಪಿ ಕಚೇರಿಯತ್ತ ಮುಖ ಮಾಡಿಲ್ಲವಂತೆ.ಇದು ಬಿಜೆಪಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಬಿಜೆಪಿಯಲ್ಲಿ ನೂತನ ಸಚಿವರಿಗಿಲ್ವಂತೆ ಬೆಲೆ!
ಸ್ವಪಕ್ಷಗಳಿಗೆ ಕೈಕೊಟ್ಟು ಕಮಲ ಹಿಡಿದ ಶಾಸಕರಿಗೆ ಬಿಜೆಪಿಯಲ್ಲಿ ಬೆಲೆ ಸಿಗುತ್ತಿಲ್ಲ ಎಂಬ ಮಾತುಗಳು ಸಹ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮೇಲ್ನೋಟಕ್ಕೆ ನಾವೆಲ್ಲಾ ಒಂದು ಎನ್ನುತ್ತಿರುವ ಬಿಜೆಪಿ ನಾಯಕರೇ ಈ ಸಚಿವರ ವಿರುದ್ಧ ಕತ್ತಿ ಮಸಿಯುತ್ತಿದ್ದಾರಂತೆ. ಅಲ್ಲದೆ ಈ ಸಚಿವರಿಗೆ ಬಿಜೆಪಿಯಲ್ಲಿ ಸಿಎಂ ಸೇರಿದಂತೆ ಕೆಲ ಬೆರಳೆಣಿಕೆ ನಾಯಕರು ಮಾತ್ರ ಮನ್ನಣೆ ನೀಡುತ್ತಿದ್ದು, ಇನ್ನುಳಿದ ಕೇಸರಿಕಲಿಗಳು ಇವರನ್ನು ಬಿಜೆಪಿಗರೆಂದು ಒಪ್ಪಿಕೊಳ್ಳುತ್ತಿಲ್ಲ ಎಂಬುದು ಜಗತ್ ಜಾಹೀರಾಗಿದೆ. ಇದು ನೂತನ ಸಚಿವರಿಗೆ ಇರಿಸುಮುರಿಸು ತರುತ್ತಿದ್ದು, ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಲ್ಲದೆ ಈ ನೂತನ ಸಚಿವರಿಗೆ ತಮ್ಮನ್ನು ಬಿಜೆಪಿ ನಾಯಕರೆಂದು ಗುರುತಿಸಿಕೊಳ್ಳಲು ಮುಜುಗರವಾಗುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿ ಅಧ್ಯಕ್ಷರ ಮಾತಿಗಿಲ್ಲ ಬೆಲೆ!
2019ರ ನವೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲಾ ಸಚಿವರುಗಳು ತಪ್ಪದೇ ಪಕ್ಷದ ಕಚೇರಿಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನಕ್ಕೆ ಬಂದು ಅಲ್ಲಿ ಕಾರ್ಯಕರ್ತರ ತಿಂಗಳಲ್ಲಿ 2 ಸಲ ಸಂಜೆ 3 ರಿಂದ 5ಗಂಟೆಯವರೆಗೂ ಅಹವಾಲು ಸ್ವೀಕರಿಸಬೇಕೆಂದು ಸುತ್ತೊಲೆ ಹೊರಡಿಸಿದ್ದರು. ಅದರಂತೆ ಆಗಸ್ಟ್ 2019 ರಲ್ಲಿ ಮೊದಲ ಸುತ್ತಿನ ಪ್ರವೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ 17 ಮಂತ್ರಿಗಳು ನಿಯಮಿತವಾಗಿ ಪಕ್ಷದ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಎರಡನೇ ಬಾರಿಗೆ ಪ್ರಮಾಣ ಸ್ವೀಕರಿಸಿದ ಸಚಿವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ
ನೂತನ ಸಚಿವರ ವಿರುದ್ಧ “ಕೇಸರಿ” ಬುಸ್ ಬುಸ್
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಈ ನಾಯಕರುಗಳು ಬಿಜೆಪಿಗೆ ಸೇರಿದಾಗ, ಅವರ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಕೂಡ ಬಿಜೆಪಿಗೆ ಸೇರಿದರು. ಆದರೆ ನಮ್ಮ ತಳಮಟ್ಟದ ಕಾರ್ಯಕರ್ತರಂತೆ, ಅವರು ಪಕ್ಷದ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಕೆಲವು ಹಿರಿಯ ಬಿಜೆಪಿ ನಾಯಕರು ಮತ್ತು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಅಭಿವೃದ್ಧಿಗೋ, ಅಧಿಕಾರಕ್ಕೋ ಪಕ್ಷದಿಂದ ಪಕ್ಷಕ್ಕೆ ಹಾರಿ ಮಂತ್ರಿಗಳಾಗಿರುವ ನೂತನ ಸಚಿವರ ನಡೆಗೆ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದು, ಈ ಅಸಮಾಧಾನದ ಹೊಗೆ ಬೆಂಕಿಯಾಗಿ ಸುಡುತ್ತೋ ಇಲ್ಲ ಹಾಗೆ ತಣ್ಣಗಾಗುತ್ತೋ ಕಾಲವೇ ಉತ್ತರಿಸಬೇಕಾಗಿದೆ.
ಮಹೇಶ್ ಎಂ ದಂಡು.








