2025 ರ ಐಪಿಎಲ್ ಟೂರ್ನಿಗಾಗಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಎಲ್ಲ ತಂಡಗಳು ಆಟಗಾರರನ್ನು ಖರೀದಿಸಿವೆ. ಇನ್ನೊಂದೆಡೆ ಕೋಚ್ ಗಳನ್ನು ಕೂಡ ನೇಮಿಸಲಾಗುತ್ತಿದೆ. ಮುಂಬೈ ತಂಡ ಕೂಡ ಈಗ ತಮ್ಮ ಕೋಚ್ ನ್ನು ನೇಮಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತನ್ನ ಫೀಲ್ಡಿಂಗ್ ಕೋಚ್ ಆಗಿ ಇಂಗ್ಲೆಂಡ್ನ ಅನುಭವಿ ಆಟಗಾರ ಕಾರ್ಲ್ ಹಾಪ್ಕಿನ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಕಾರ್ಲ್ ಹಾಪ್ಕಿನ್ಸನ್ ಅವರ ಕೋಚಿಂಗ್ ಅಡಿಯಲ್ಲಿ ಇಂಗ್ಲೆಂಡ್ ತಂಡ ಏಕದಿನ ಮತ್ತು ಟಿ20 ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿತ್ತು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿರುವ 43 ವರ್ಷದ ಹಾಪ್ಕಿನ್ಸನ್ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ 64 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 2705 ರನ್ ಗಳಿಸಿದ್ದಾರೆ. 92 ಲಿಸ್ಟ್ ಎ ಪಂದ್ಯಗಳಲ್ಲಿ 1400 ರನ್ ಕಲೆಹಾಕಿದ್ದಾರೆ ಆದರೆ ಕೋಚ್ ಆಗಿ ಸಾಕಷ್ಟು ಯಶಸ್ಸು ಸಾಧಿಸಿರುವ ಕಾರ್ಲ್, ಫೀಲ್ಡಿಂಗ್ ಕೋಚ್ ಆಗಿ 2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮುಂಬೈ ಅವರನ್ನು ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ.
ಮುಂಬೈ ತಂಡವು 2013, 2015, 2017, 2019 ಮತ್ತು 2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು.








