ನವದೆಹಲಿ: ರಾಜೀವ್ ಗಾಂಧಿ ಫೌಂಡೇಷನ್ ನಿಂದ ವಿವಿಧ ರೀತಿಯ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅಂತರ್ ಇಲಾಖಾ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಈ ವಿಚಾರವಾಗಿ ಕಾಂಗ್ರೆಸ್, ಕೇಂದ್ರ ಸರ್ಕಾರ ಕ್ರಮಕ್ಕೆ ತಾವು ಅಂಜುವುದೂ ಇಲ್ಲ. ಬಾಗುವುದೂ ಇಲ್ಲ ಎಂದಿದೆ.
ರಾಹುಲ್ ಗಾಂಧಿ ಟ್ವೀಟ್ ನಲ್ಲಿ, ಇದೊಂದು ರೀತಿ ಕತ್ತಲಲ್ಲಿ ಕಣ್ಣು ಕಟ್ಟಿಕೊಂಡು ಶೋಧ ಕಾರ್ಯ ಮಾಡಿದಂತೆ. ಹಾಗಾಗಿ ಈ ಬಗ್ಗೆ ತಾನು ಆತಂಕಗೊಳ್ಳುವುದಿಲ್ಲ ಎಂದಿದ್ದಾರೆ. ಮೋದಿ ಅವರು ಲೋಕ ತಮ್ಮಂತೇ ಇದೆ ಎಂದು ಭಾವಿಸಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಬೆಲೆ ಇದೆ, ಇಲ್ಲವೇ ಅವರನ್ನು ಹೆದರಿಸಬಹುದು ಎಂಬುದು ಅವರ ಭಾವನೆಯಾಗಿದೆ. ಸತ್ಯಕ್ಕಾಗಿ ಹೋರಾಡುವವರಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೂ ಅವರನ್ನು ಬೆದರಿಸಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಇಂಥ ಮೂರ್ಖತನದ ನಿರ್ಧಾರದಿಂದ ಕಾಂಗ್ರೆಸ್ ಬೆದರುವುದಿಲ್ಲ. ಸರ್ಕಾರ ದೇಶದ ಜನರಿಗೆ ಸರಿಯಾದ ಉತ್ತರ ನೀಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮನ್ನು ಬೆದರಿಸುವ ಇಂಥ ಕ್ರಮಗಳಿಂದ ನಮ್ಮ ನಿರ್ಧಾರ ಮತ್ತಷ್ಟು ಗಟ್ಟಿಯಾಗುತ್ತದೆ ಎಂದಿರುವ ರಾಹುಲ್, ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸುವವರ ವಿರುದ್ಧ ತಪ್ಪುಗಳನ್ನು ತೋರಿಸುವವರ ವಿರುದ್ಧ ನರೇಂದ್ರ ಮೋದಿ ಮತ್ತು ಅಮಿತ್ ಶಾ ದ್ವೇಷಪೂರಿತವಾಗಿ ಇಲ್ಲದ ತನಿಖೆಗಳಿಗೆ ಆದೇಶಿಸುವುದನ್ನೇ ರೂಢಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.








