ಶಾಸಕ ಶರತ್ ಬಚ್ಚೇಗೌಡ ದಂಪತಿಗೆ ಕೊರೋನಾ ಸೋಂಕು
ಚಿಕ್ಕಬಳ್ಳಾಪುರ, ಜುಲೈ 8: ಸಂಸದ ಬಿಎನ್ ಬಚ್ಚೇಗೌಡ ಅವರ ಪುತ್ರ, ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಶರತ್ ಬಚ್ಚೇಗೌಡ ಮತ್ತು ಅವರ ಪತ್ನಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, ಇಂದು ಸಂಜೆ ಬಂದ ವರದಿಯಲ್ಲಿ ಶರತ್ ಮತ್ತು ಅವರ ಪತ್ನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶರತ್ ಬಚ್ಚೇಗೌಡ ಅವರು, ಜುಲೈ 6 ಸೋಮವಾರದಂದು, ನನಗೆ ಸ್ವಲ್ಪ ಮೈ ಕೈ ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ನಾನು ಮತ್ತು ನನ್ನ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಶರತ್ ಒಳಗಾಗಿದ್ದು, ಇವತ್ತು ಸಂಜೆ ಇಬ್ಬರಿಗೂ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ನಿಮಗೆ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆದರೂ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀವಿ.

ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ.
ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ರೋಗ ನಿರೋಧಕ ಶಕ್ತಿಯು ನಮ್ಮಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇವೆ.
ಇಂತಿ,
ಶಾರತ್ ಬಚ್ಚೇಗೌಡ
ಶಾಸಕರು, ಹೊಸಕೋಟೆ ವಿಧಾನಸಭಾ ಕ್ಷೇತ್ರ.
ಎಂದು ಮಾಹಿತಿ ನೀಡಿದ್ದಾರೆ.








