ಹುಬ್ಬಳ್ಳಿ: ಇಲ್ಲಿಯ ಉಣಕಲ್ ನಲ್ಲಿ ಮಲಗಿದ್ದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ 9 ಜನ ಮಾಲಾಧಾರಿಗಳ ಪೈಕಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
9 ಅಯ್ಯಪ್ಪ ಮಾಲಾಧಾರಿಗಳು (Ayyappa Devotees) ತೀವ್ರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ನಿಜಲಿಂಗಪ್ಪ ಮಲ್ಲಪ್ಪ ಬೇಪೂರು (58), ಸಂಜಯ್ ಪ್ರಕಾಶ್ ಸವದತ್ತಿ (17) ಸಾವನ್ನಪ್ಪಿದ ಮಾಲಾಧಾರಿಗಳು.
ಹುಬ್ಬಳ್ಳಿಯ (Hubballi) ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 9 ಜನ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ 7 ಜನರಿಗೆ ಚಿಕಿತ್ಸೆ ಮುಂದುವರೆದಿದ್ದು, ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮಾಲಾಧಿಕಾರಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ








