ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ರಾಜ್ಯದ ಜನರ ತೆರಿಗೆ ಹಣ ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೆಚ್ಚಾಗಿ ಸ್ಮರಿಸುತ್ತಿದೆ. ಅವಕಾಶ ಸಿಕ್ಕಾಗೆಲ್ಲ ಅಂಬೇಡ್ಕರರನ್ನು ನಿಂದಿಸುತ್ತ, ಅವಮಾನಿಸುತ್ತ ಬಂದಿದ್ದ ಕಾಂಗ್ರೆಸ್ ಗೆ ಈಗ ಅಂಬೇಡ್ಕರ್ ನೆನಪಾಗಿದೆ ಎಂದು ಆರೋಪಿಸಿದ್ದಾರೆ.
ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇವತ್ತಿನವರೆಗೂ ಈ ಕಾಂಗ್ರೆಸ್ ಪಕ್ಷದವರು ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ಗೌರವ ಹೊಂದಿರಲಿಲ್ಲ. ಹಿಂದೆ ನೆಹರೂ ಇದ್ದಾಗ ತಾತ್ಕಾಲಿಕ ಸರ್ಕಾರ ರಚಿಸಿದ್ದು, ಬಾಬಾಸಾಹೇಬ ಅಂಬೇಡ್ಕರ್ ಅವರು ಮಂತ್ರಿಗಳಾಗಿ ಜನ ಮೆಚ್ಚುವ ಕೆಲಸ ಮಾಡುತ್ತಿದ್ದರು. ಅವರ ಜನಪ್ರಿಯತೆ- ಪ್ರಭಾವ ಹೆಚ್ಚಾಗುವುದನ್ನು ಗಮನಿಸಿ, ಕಾಂಗ್ರೆಸ್ ಪಕ್ಷದ ಬೇಳೆ ಬೇಯುವುದಿಲ್ಲ ಎಂದು ಹೇಳಿ ಅವರನ್ನು ನಿಂದಿಸುವ, ಹಿಂಸಿಸುವ ಕೆಲಸ ಮಾಡಲಾಗಿತ್ತು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಗೆ ಸಮಗ್ರತೆ ಬಗ್ಗೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ. ಆದರೆ, ಬಾಬಾ ಸಾಹೇಬರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.