ಕಾನ್ಪುರ: ಬಂಧನಕ್ಕೆ ತೆರಳಿದ್ದ ೮ ಮಂದಿ ಪೊಲೀಸರ ಬರ್ಬರ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ಹೆಡೆಮುರಿ ಕಟ್ಟುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಂತಕನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಿದ ಪೊಲೀಸರು ಕಾನ್ಪುರಕ್ಕೆ ಎಳೆದು ತಂದಿದ್ದಾರೆ. ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದ್ದ ವಿಕಾಸ್ ದುಬೆ ಸಹಚರರನ್ನು ಪೊಲೀಸರು ಶೂಟ್‌ಔಟ್ ಮಾಡಿದ್ದರು.
ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಕಳೆದ ಗುರುವಾರ ರಾತ್ರಿ ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಪೊಲೀಸರು ವಿಕಾಸ್ ಅಡಗಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್ ಮೇಲಿನಿಂದ ೮ರಿಂದ ೧೦ ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್‌ಪುರ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್ ಹಾಗೂ ಐವರು ಪೇದೆಗಳು ಸೇರಿದಂತೆ ೮ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಘಟನೆ ನಂತರ ತಲೆಮೆರಿಸಿಕೊಂಡಿದ್ದ ವಿಕಾಸ್ ದುಬೆಗಾಗಿ ಪೊಲೀಸರು ನಾನಾ ಕಡೆಗಳಲ್ಲಿ ಜಾಲಾಡಿದ್ದರು. ನಿನ್ನೆ ಈತ ಹರಿಯಾಣದ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿತ್ತು. ಈ ಮಧ್ಯೆ ಆತನ ಆಪ್ತ ಅಮರ್, ಸಹಚರರಾದ ಪ್ರಭಾತ್ ಹಾಗೂ ರಣಬೀರ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಜತೆಗೆ ಹಂತಕ ವಿಕಾಸ್ ದುಬೆಯ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಲಾಗಿತ್ತು.
ಹAತಕ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ಅಡಗಿರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ದುಬೆ ಅಡಗಿರುವ ಜಾಗದ ಸುಳಿವು ನೀಡಿದರೆ ೧೦ ಲಕ್ಷ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಣೆ ಮಾಡಿದ್ದರು.
ವಿಕಾಸ್ ದುಬೆ ವಿರುದ್ಧ ಸುಮಾರು ೬೦ಕ್ಕೂ ಹೆಚ್ಚು ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಸರ್ಕಾರವಿದ್ದಾಗ ಮಂತ್ರಿ ಆಗಿದ್ದ ಸಂತೋಷ್ ಶುಕ್ಲಾ ಸೇರಿ ಸಾಕಷ್ಟು ಜನರನ್ನು ಹತ್ಯೆ ಮಾಡಿದ ಕೇಸ್‌ನಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ.