ಅಮೆರಿಕದ (America) ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಪನಾಮ ಕಾಲುವೆ ವಿಚಾರದಲ್ಲಿ ಚೀನಾವನ್ನು ಎಳೆದು ತಂದಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೂ ಟ್ರಂಪ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ತಿಂಗಳು ಶ್ವೇತಭವನದಲ್ಲಿ ಟ್ರಂಪ್ ತಮ್ಮ 2ನೇ ಅವಧಿ ಪ್ರಾರಂಭಿಸಲಿದ್ದಾರೆ. ಈ ವೇಳೆ ಹಲವು ನಿರ್ಧಾರಗಳನ್ನು ಅವರು ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವುದೂ ಒಂದಾಗಿದೆ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ಈ ನಿರ್ಧಾರ ಪ್ರಕಟಿಸಿದ್ದರು. ಈಗ ಸಾಕಾರಗೊಳಿಸಲು ಮುಂದಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಮಾತನ್ನು ಕೇಳುತ್ತಿದೆ. ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಚೀನಾದಿಂದಾಗಿ ಕೋವಿಡ್ ಪ್ರಪಂಚದಾದ್ಯಂತ ಹರಡಿತ್ತು. ಇದು ತಿಳಿದಿದ್ದರೂ ಡಬ್ಲ್ಯೂಹೆಚ್‌ಓ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಕಾರಣ ಚೀನಾ ಎಂದು ಗೊತ್ತಿದ್ದರೂ, ಚೀನಾ ಹೆಸರು ಪ್ರಸ್ತಾಪಿಸಲಿಲ್ಲ. WHO ಚೀನಾ ಕಡೆಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಈಗಲೂ ವಿಶ್ವದ ಹಲವು ದೇಶಗಳನ್ನು ಅಸಮಾಧಾನಗೊಳಿಸಿದೆ. ಟ್ರಂಪ್ ಕೊರೊನಾವನ್ನು ʻಚೀನಾ ವೈರಸ್ʼ ಎಂದೇ ಕರೆದಿದ್ದರು. WHO ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಹೀಗಾಗಿ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಆರಂಭದಿಂದಲೂ ಅಮೆರಿಕವೇ ವಿಶ್ವ ಆರೋಗ್ಯ ಸಂಸ್ಥೆಗೆ ಅತ್ಯಧಿಕ ಧನಸಹಾಯ ಮಾಡುತ್ತಾ ಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕಡಿಮೆ ದೇಣಿಗೆ ನೀಡುತ್ತಿದ್ದ ಚೀನಾ ಪರ ಇದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಎಂಬುದು ಟ್ರಂಪ್ ಆರೋಪವಾಗಿತ್ತು.
ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡಾಕ್ಷಣ, ಟ್ರಂಪ್ ಅವರ ನಿರ್ಧಾರವನ್ನು ಹಿಂತೆದುಕೊಂಡರು. ಅಮೆರಿಕವನ್ನು ಡಬ್ಲ್ಯೂಹೆಚ್‌ಒಗೆ ಪುನಃ ಸೇರಿಸಿಕೊಂಡರು. ಈಗ 2ನೇ ಅವಧಿಗೆ ನಿಯೋಜಿತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯಲಿದ್ದಾರೆ ಎಂದು ಹೇಳಲಾಗಿದೆ.








