ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಕ್ರಾಂತಿ ನಂತರ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಘೋಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಹಿರಿಯ ನಾಯಕರು ನಿಖಿಲ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ನಿಖಿಲ್ ಗೆ ಅಧ್ಯಕ್ಷನಾಗುವ ಅನುಭವ ಇಲ್ಲ. ಅಲ್ಲದೇ, ನಿಖಿಲ್ ಕೈ ಕೆಳಗೆ ಕೆಲಸ ಮಾಡಲು ಕೆಲವು ಹಿರಿಯರಿಗೆ ಇರಿಸು ಮುರಿಸು ಉಂಟಾಗುತ್ತದೆ. ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಮತ್ತೆ ಕುಟುಂಬ ರಾಜಕೀಯ ಹಣೆಪಟ್ಟಿ ಪಕ್ಷಕ್ಕೆ ಬರಲಿದೆ. ಹೀಗಾಗಿ ನಿಖಿಲ್ ಗೆ ಆ ಸ್ಥಾನ ನೀಡಬಾರದು ಎಂದು ಹಿರಿಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಶಾಸಕಾಂಗ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಜಿ.ಟಿ.ದೇವೇಗೌಡರಿಗೆ ಆ ಸ್ಥಾನ ನೀಡಬೇಕೆಂದು ಹಲವರು ಸಲಹೆ ನೀಡುತ್ತಿದ್ದಾರೆ.
ಕುರುಬ ಸಮುದಾಯದ ನಾಯಕ ಬಂಡೆಪ್ಪ ಕಾಶಂಪೂರ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು. ಜೆಡಿಎಸ್ ನಾಯಕ ಆಗಿರುವ ಸುರೇಶ್ ಬಾಬು ಅವರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಬೇಕು. ನಿಖಿಲ್ ಕುಮಾರಸ್ವಾಮಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷದ ಸಂಘಟನೆ ಜವಾಬ್ದಾರಿ ಕೊಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂದು ಕೂಡ ಹಲವರು ಸಲಹೆ ನೀಡುತ್ತಿದ್ದಾರೆ.








