ಮೈಸೂರಿನ KRS ರಸ್ತೆಗೆ ಸಿದ್ದರಾಮಯ್ಯನವರ ಹೆಸರನ್ನು ಇಡುವ ಚರ್ಚೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಪ್ರಗತಿಗೆ ಸಿದ್ದರಾಮಯ್ಯನವರು ಬಹಳ ದೊಡ್ಡ ಕೊಡುಗೆ ನೀಡಿದ್ದಾರಂತೆ. ಹಾಗಾದರೆ, ಈ ರಾಜ್ಯಕ್ಕೂ ಅವರ ಹೆಸರನ್ನೇ ಇಡಲಿ! ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿಕೆ, ಸಿದ್ದರಾಮಯ್ಯನವರು ತಮ್ಮ ಹೆಸರಿನ ರಾಜಕಾರಣವನ್ನು ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದು. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾನೂ ಮೈಸೂರಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹಾಗಂತ ನಾನು ನನ್ನ ಹೆಸರನ್ನು ಈ ರಸ್ತೆಗೆ ಇಡಿ ಎಂದು ಕೇಳಿದ್ದೇನೆಯೇ? ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ತಮ್ಮ ಕಾಲದಲ್ಲಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ, ರಾಜಕೀಯ ವ್ಯಕ್ತಿತ್ವವನ್ನು ಅಭಿವೃದ್ಧಿ ಕಾರ್ಯಗಳೇ ಮಾತನಾಡಬೇಕು. ಹೆಸರಿನ ರಾಜಕಾರಣದಿಂದ ರಾಜ್ಯ ಜನತೆಗೂ, ಪ್ರಗತಿಗೂ ಯಾವುದೇ ಲಾಭವಾಗುವುದಿಲ್ಲ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿವಾದಕಾರಿ ಹೇಳಿಕೆಯ ನಂತರ ರಾಜಕೀಯ ವಲಯದಲ್ಲಿ ಮತ್ತೆ ಸಿದ್ದರಾಮಯ್ಯನವರ ಹೆಸರಿನ ರಾಜಕಾರಣ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಹೊಸ ಚರ್ಚೆಗಳು ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರವು ಮತ್ತಷ್ಟು ಗಂಭೀರ ರೂಪ ತಾಳುವ ಸಾಧ್ಯತೆ ಇದೆ.








