ಬೆಂಗಳೂರು: ಮದುವೆಗೆಂದು ಸಾಲ ಕೊಡುವುದಾಗಿ ಯುವತಿಯನ್ನು ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಬಿಜೆಪಿ ಮುಖಂಡ ಅತ್ಯಾಚಾರ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಈ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ (BJP) ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ (Ashoknagar) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಸೋಮಶೇಖರ್ ಬಳಿ ಯುವತಿ 6 ಲಕ್ಷ ರೂ. ಸಾಲ ಕೇಳಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣ ಕೊಡುವುದಾಗಿ ಸಂತ್ರಸ್ತೆಯನ್ನು ಪಿಜಿಯಿಂದ ಲ್ಯಾಂಗ್ ಫೋರ್ಡ್ ರಸ್ತೆಯ ತನ್ನ ಫ್ಲಾಟ್‌ಗೆ ಕರೆದೊಯ್ದು ಇಚ್ಚೆಗೆ ವಿರುದ್ಧವಾಗಿ ಮದ್ಯಕುಡಿಸಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ಸಲ್ಲಿಸಿದ್ದಾರೆ.
ಘಟನೆ ನಡೆದ ಮೂರು ತಿಂಗಳುಗಳ ನಂತರ ಯುವತಿ ದೂರು ನೀಡಿದ್ದಾರೆ. ಸಕಲೇಶಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಫರ್ಧಿಸಿ ಪರಾಜಯಗೊಂಡಿದ್ದ ಸೋಮಶೇಖರ್ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.








