ಮಂಗಳೂರು: ಪುಣ್ಯ ಕ್ಷೇತ್ರ ಕ್ಷೇತ್ರ ಧರ್ಮಸ್ಥಳದ (Dharmasthala) ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲೇ ನಿಲ್ಲಬೇಕಿತ್ತು. ವೀಕೆಂಡ್, ರಜಾ ದಿನ, ವಿಶೇಷ ಹಬ್ಬ ಬಂದರೆ ಸರತಿ ಸಾಲಿನಲ್ಲಿ ಹೆಚ್ಚಿನ ಜನ ಆಗಮಿಸುತ್ತಿದ್ದರು. ಹೀಗಾಗಿ ಭಕ್ತರ ಈ ಕಷ್ಟವನ್ನರಿತ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು (Veerendra Heggade) ಇದಕ್ಕೊಂದು ಬದಲಿ ಆರಾಮದಾಯಕ ವ್ಯವಸ್ಥೆ ಮಾಡಿದ್ದಾರೆ.
ಪರಿಕಲ್ಪನೆಯ ಈ ವ್ಯವಸ್ಥೆ ರಾಜ್ಯದಲ್ಲೇ ಪ್ರಥಮ ಎನಿಸಿಕೊಂಡಿದ್ದು ಇಂದು ಲೋಕಾರ್ಪಣೆಗೊಳ್ಳಲಿದೆ. ತಿರುಪತಿ ಕ್ಷೇತ್ರಗಳಲ್ಲಿ ಕ್ಯೂ ಕಾಂಪ್ಲೆಕ್ಸ್ ಮೂಲಕ ನೀವು ತೆರಳಿ ದೇವರ ದರ್ಶನ ಪಡೆಯುವ ಮಾದರಿಯಲ್ಲೇ ಧರ್ಮಸ್ಥಳದಲ್ಲೂ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಲಾಗಿದೆ.
ಮಕ್ಕಳು, ಮಹಿಳೆಯರು, ವಯಸ್ಸಾದವರು ಸೇರಿದಂತೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತುಕೊಂಡೇ ಸಾಗಬೇಕಾಗಿತ್ತು. ಹೀಗಾಗಿ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ (Manjunatha Swamy Temple) ಹಿಂಭಾಗದಲ್ಲಿ ಬರೋಬ್ಬರಿ 2,75,177 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕ್ಯೂ ಕಾಂಪ್ಲೆಕ್ಸ್ ತಲೆ ಎತ್ತಿದೆ.
ಸಾನ್ನಿಧ್ಯ ಹೆಸರಿನ ಈ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೇ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಎರಡು ಅಂತಸ್ಥಿನಲ್ಲಿ ತಲಾ 8 ರಂತೆ 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12ಸಾವಿರ ಜನ ತಂಗಲು ಅವಕಾಶ ಕಲ್ಪಿಸಲಾಗಿದೆ.
ಇದು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕ್ಯೂ ಕಾಂಪ್ಲೆಕ್ಸ್ ಪ್ರವೇಶಿಸುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮೆರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ. ಆರಂಭದಲ್ಲೆ ಸೇವಾ ರಶೀದಿ ಕೌಂಟರ್ ಇದೆ. ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳಿವೆ.
ಭಕ್ತಾಧಿಗಳಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ಭವನ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ಪ್ರಸಾರವಾಗುತ್ತಿರುತ್ತದೆ. ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಕೂಡ ಇಲ್ಲಿದೆ.
ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದಾಗಿ ಆರೇಳು ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಭಕ್ತರು ಈ ಮೂಲಕ ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.








